ಪ್ರಧಾನಿ ಗುಜರಾತ್ ಭೇಟಿ; ತಾಯಿ ಹೀರಾಬೆನ್ ಆಶೀರ್ವಾದ ಪಡೆದ ಮೋದಿ
ಅಹಮದಾಬಾದ್, ಮಾರ್ಚ್ 12: ತವರು ರಾಜ್ಯ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ತಾಯಿ ಹೀರಾಬೆನ್ರನ್ನು ಭೇಟಿಯಾಗಿ, ಆಶೀರ್ವಾದ ಪಡೆದಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದು, ಅದರಲ್ಲಿ ಪಂಜಾಬ್ ಹೊರತುಪಡಿಸಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಗುಜರಾತ್ಗೆ ಭೇಟಿ ನೀಡಿದ್ದಾರೆ. ಇದೇ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ.
ಶುಕ್ರವಾರ ಅಹ್ಮದಾಬಾದ್ ಏರ್ಪೋರ್ಟ್ನಿಂದ ಗಾಂಧಿನಗರದಲ್ಲಿರುವ ಕಮಲಂ ಬಿಜೆಪಿ ಪ್ರಧಾನ ಕಚೇರಿಯವರೆಗೆ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ, ಬಳಿಕ ಸಂಜೆ ವೇಳೆ ತಮ್ಮ ತಾಯಿ ಹೀರಾಬೆನ್ ಇದ್ದ ಮನೆಗೆ ಹೋಗಿ, ಅವರ ಆಶೀರ್ವಾದ ಪಡೆದಿದ್ದಾರೆ. ಅಮ್ಮನೊಂದಿಗೆ ಕುಳಿತು ಊಟ ಮಾಡಿದ್ದಾರೆ. ಇತ್ತೀಚೆಗೆ ಸುಷ್ಮಾ ಸ್ವರಾಜ್ ಜನ್ಮ ದಿನದಂದು ಪ್ರಧಾನಿ ಮೋದಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಹಳೆಯ ಘಟನೆಯೊಂದರ ಮೆಲುಕು ಹಾಕಿದ್ದರು.

ಇದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅಹ್ಮದಾಬಾದ್ನಲ್ಲಿ ಗುಜರಾತ್ ಪಂಚಾಯತ್ ಮಹಾಸಮ್ಮೇಳನದಲ್ಲಿ ಭಾಷಣ ಮಾಡಿದರು. ಈ ವೇಳೆ ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಉಲ್ಲೇಖ ಮಾಡಿದ ಮೋದಿ, ಮಹಾತ್ಮ ಗಾಂಧಿ ಯಾವಾಗಲೂ ಗ್ರಾಮೀಣ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದರು. ಹಳ್ಳಿಗಳು ಸ್ವಾವಲಂಬಿಯಾಗಬೇಕು ಎಂಬುದು ಅವರ ಪರಿಕಲ್ಪನೆಯಾಗಿತ್ತು. ನಾವಿಂದು ಗ್ರಾಮೀಣ ವಿಕಾಸದ ಮೂಲಕ ಬಾಪು ಕನಸನ್ನು ನನಸು ಮಾಡಿದ್ದೇವೆ ಎಂದು ಹೇಳಿದರು.
ಈ ಮೊದಲು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ಮೋದಿ, ಇನ್ನಷ್ಟು ಪರಿಣಾಮಕಾರಿಯಾಗಿ ಜನಸೇವೆ ಮಾಡುವ ವಿಧಾನಗಳ ಬಗ್ಗೆ ಚರ್ಚಿಸಿದರು.

ಜನರು ನೀಡುತ್ತಿರುವ ಬೆಂಬಲ, ಸಹಕಾರಕ್ಕೆ ನಾನು ವಿಧೇಯನಾಗಿರುತ್ತೇನೆ. ಅಪಾರ ಸಂಖ್ಯೆಯ ಜನರು ಬೆಂಬಲ ನೀಡಿದಾಗ ನಮ್ಮಲ್ಲಿ ಕೆಲಸ ಮಾಡುವ ಉತ್ಸಾಹವೂ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಗುಜರಾತ್‌ನಲ್ಲಿ ಈಗಿನಿಂದಲೇ ಚುನಾವಣೆ ಪ್ರಚಾರ ಆರಂಭ ಮಾಡಿದಂತಿದೆ. ಗುಜರಾತ್‌ನಲ್ಲಿ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಭೇಟಿ ಅತ್ಯಂತ ಮಹತ್ವ ಎನ್ನಿಸಿದೆ. ಈಗಷ್ಟೇ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.












Click it and Unblock the Notifications