ಜೈಲಿನಿಂದ ಹೊರಬಂದ ಕೂಡಲೇ ಹಳೆ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಬಂಧನ
ಅಹ್ಮದಾಬಾದ್, ಜನವರಿ 23: ದೇಶದ್ರೋಹ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಗುಜರಾತ್ ಕಾಂಗ್ರೆಸ್ ಯುವ ನಾಯಕ ಹಾರ್ದಿಕ್ ಪಟೇಲ್ ಇಂದು ಜಾಮೀನು ಪಡೆದು ಹೊರಬಂದರು, ಆದರೆ ಹೊರಬಂದ ಕೂಡಲೇ ಅವರನ್ನು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು.
2015 ರಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅಹ್ಮದಾಬಾದ್ ಸ್ಥಳೀಯ ನ್ಯಾಯಾಲಯವು ಪಟೇಲ್ ವಿರುದ್ಧ ವಾರೆಂಟ್ ಹೊರಡಿಸಿತ್ತು. ಅದರಂತೆ ಜನವರಿ 18 ರಂದು ಹಾರ್ದಿಕ್ ಪಟೇಲ್ ಅವರನ್ನು ಬಂಧಿಸಲಾಗಿತ್ತು.
ಇದೇ ಪ್ರಕರಣದಲ್ಲಿ ಬುಧವಾರ ಹಾರ್ದಿಕ್ ಪಟೇಲ್ ಗೆ ಜಾಮೀನು ದೊರೆತು ಇಂದು ಮಧ್ಯಾಹ್ನದ ವೇಳೆಗೆ ಸಾಬರಮತಿ ಸೆಂಟ್ರಲ್ ಜೈಲಿನಿಂದ ಅವರು ಹೊರಗೆ ಬಂದರು. ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಅವರನ್ನು ಗಾಂಧಿನಗರ ಪೊಲೀಸರು ಬಂಧಿಸಿದರು.
Recommended Video

2017 ರಲ್ಲಿ ಹಾರ್ದಿಕ್ ಪಟೇಲ್ ವಿರುದ್ಧ ಗಾಂಧಿನಗರದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಅವರನ್ನು ಇಂದು ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ.
2017 ರ ಚುನಾವಣೆ ಸಮಯ ಹಾರ್ದಿಕ್ ಪಟೇಲ್ ಅವರು ಪೊಲೀಸರ ಅನುಮತಿ ಪಡೆಯದೇ ಮಾನ್ಸಾ ಪಟ್ಟಣದಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಬಗ್ಗೆ ಆಗಲೇ ದೂರು ದಾಖಲಾಗಿ ಎಫ್‌ಐಆರ್ ಸಹ ದಾಖಲಾಗಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಾರ್ದಿಕ್ ಪಟೇಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
2015 ರಲ್ಲಿ ಪಾಟೀದಾರ್ ಮೀಸಲಾತಿ ಹೋರಾಟ ಸಮಯದಲ್ಲಿ ಹಿಂಸಾಚಾರ ಉಂಟಾಗಿತ್ತು. ಈ ಸಂದರ್ಭದಲ್ಲಿ ಚಳವಳಿಯ ನಾಯಕತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಮತ್ತು ಇನ್ನೂ ಕೆಲವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ 2016 ರಲ್ಲಿ ಹಾಗೂ ನವೆಂಬರ್ 2018 ರಲ್ಲಿ ಹಾರ್ದಿಕ್ ಪಟೇಲ್ ಗೆ ಜಾಮೀನು ನೀಡಲಾಗಿತ್ತು.
ಆದರೆ ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರೆಂಟ್ ಜಾರಿ ಆದ ಕಾರಣ ಅಪರಾಧ ವಿಭಾಗದ ಪೊಲೀಸರು ಜನವರಿ 18 ರಂದು ಬಂಧಿಸಿದ್ದರು. ನಿನ್ನೆ ಅವರಿಗೆ ಜಾಮೀನು ದೊರೆತಿತಾದರೂ ಅವರನ್ನು ಮತ್ತೆ ಹಳೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications