ರೈಲು ಹಳಿ ಮೇಲೆ ಗಿರ್ ಅರಣ್ಯದ ಮೂರು ಸಿಂಹಗಳ ಕಳೇಬರ ಪತ್ತೆ
ಅಹ್ಮದಾಬಾದ್ (ಗುಜರಾತ್), ಡಿಸೆಂಬರ್ 18: ಗುಜರಾತ್ ನ ಅಮ್ರೇಲಿ ಜಿಲ್ಲೆಯ ಗಿರ್ ಅರಣ್ಯ ವಲಯದಲ್ಲಿ ಮೂರು ಏಷ್ಯಾಟಿಕ್ ಸಿಂಹಗಳು ಸಾವನ್ನಪ್ಪಿವೆ. ಸೋಮವಾರ ಹಾಗೂ ಮಂಗಳವಾರದ ಕತ್ತಲ ವೇಳೆಯಲ್ಲಿ ರೈಲು ಹರಿದು, ಅವುಗಳು ಮೃತಪಟ್ಟಿವೆ. ರೈಲು ಹಳಿಗಳ ಮೇಲೆ ಸಿಂಹಗಳ ಕಳೇಬರ ಪತ್ತೆಯಾಗಿವೆ.
ಬೊರಲ ಹಳ್ಳಿಯ ಬಳಿ ರೈಲು ಹಳಿಯ ಮೇಲೆ ಕಳೇಬರ ಪತ್ತೆಯಾಗಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಹೇಳಿದ್ದಾರೆ. ಸರಕು ಸಾಗಣೆ ರೈಲು ಸಂಚರಿಸುವ ವೇಳೆ ಆರು ಸಿಂಹಗಳು ಹಳಿ ದಾಟಲು ಯತ್ನಿಸಿವೆ. ಆ ಪೈಕಿ ಮೂರು ಸಿಂಹಗಳು ರಾತ್ರಿ ಹನ್ನೆರಡೂ ಮುಕ್ಕಾಲರ ವೇಳೆಯಲ್ಲಿ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಗಂಡು ಸಿಂಹಗಳು ಹಾಗೂ ಒಂದು ಹೆಣ್ಣು ಸಿಂಹ ಒಂದೂವರೆಯಿಂದ ಎರಡು ವರ್ಷ ಪ್ರಾಯದವು ಅಪಘಾತದಲ್ಲಿ ಮೃತಪಟ್ಟಿವೆ. ಈ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತದೆ. ರೈಲಿನ ವೇಗ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿ ಇತ್ಯಾದಿ ಆಯಾಮಗಳಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ ನಿಂದ ಈಚೆಗೆ ಗಿರ್ ಅರಣ್ಯ ವಲಯದಲ್ಲಿ ಕನಿಷ್ಠ ಮೂವತ್ತು ಸಿಂಹಗಳು ಸಾವನ್ನಪ್ಪಿವೆ. ಮೂವತ್ತಾರು ಸಿಂಹಗಳನ್ನು ಹಿಡಿದು, ಮುಂಜಾಗ್ರತಾ ಕ್ರಮವಾಗಿ ಮೂರು ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸೆಪ್ಟೆಂಬರ್ ನಲ್ಲಿ ಮೂರು ವಾರದ ಫಾಸಲೆಯಲ್ಲಿ ಇಪ್ಪತ್ಮೂರು ಸಿಂಹಗಳು ಮೃತಪಟ್ಟಿದ್ದವು.












Click it and Unblock the Notifications