ದಾವೂದನನ್ನು ಹಿಡಿಯೋಣ- ಅಮೆರಿಕಕ್ಕೆ ಭಾರತ ತಾಕೀತು
ನವದೆಹಲಿ, ಸೆ.10: ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇತ್ತೀಚೆಗೆ ಒಂದೇ ಸಮನೆ ಖಡಕ್ ನಿರ್ಧಾರಗಳನ್ನು 'ಕೈ'ಗೊಳ್ಳುತ್ತಿರುವ ಭಾರತ ಸರಕಾರ ಈಗ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ.
ಅಮೆರಿಕದತ್ತ ಕೈಚಾಚಿರುವ ಕೇಂದ್ರ ಯುಪಿಎ ಸರಕಾರವು 'ಹೇಗಾದರೂ ಮಾಡಿ ಆ ಬ್ಲಡಿ ದಾವೂದ್ ಇಬ್ರಾಹಿಂನನ್ನು ಮಟ್ಟ ಹಾಕೋಣ. ಸ್ವಲ್ಪ ಸಹಾಯ ಮಾಡಿ' ಎಂದು ಕೋರಿದೆ.
'ದಶಕದ ಹಿಂದಿನ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ದೋಷಿ ದಾವೂದ್ ಇಬ್ರಾಹಿಂ ಉಪಟಳ ಬಹಳವಾಗಿದೆ. ದೇಶದಲ್ಲಿ ನಡೆಯುತ್ತಿರುವ ಅನೇಕ ಭಯೋತ್ಪಾದನೆ ಕೃತ್ಯಗಳ ತೆರೆಮರೆಯ ಸೂತ್ರಧಾರ ಅವನೇ ಎಂಬುದು ನಮಗೆ ಮನದಟ್ಟಾಗಿದೆ. ಅವನನ್ನು ಹಿಡಿಯಲು ನಮಗೆ ಸ್ವಲ್ಪ ನೆರವಾಗಿ' ಎಂದು ಅಮೆರಿಕ ಸರಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ಖುದ್ದು ಕೇಂದ್ರ ಸಚಿವ ಶುಶೀಲ್ ಕುಮಾರ್ ಶಿಂದೆ ಅವರೇ ತಿಳಿಸಿದ್ದಾರೆ.

'ಈ ಸಂಬಂಧ ಜಂಟಿ ಕಾರ್ಯಾಚಾರಣೆ ನಡೆಸೋಣ' ಎಂದು ಭಾರತ ಸರಕಾರವು ಅಮೆರಿಕದೆದುರು ಜಂಟಿ ಕಾರ್ಯಾಚರಣೆ ಯೋಜನೆಯೊಂದನ್ನು ಸಲ್ಲಿಸಿದೆ. ಈಗಾಗಲೇ ಭೂಗತ ಪಾತಕಿ ದಾವೂದ್ ವಿರುದ್ಧ red corner notice ಜಾರಿಯಲ್ಲಿದೆ. ನಮ್ಮ ಜಂಟಿ ಕಾರ್ಯಾಚರಣೆ ಯೋಜನೆಗೆ US Attorney General Eric Holder ಸಹ ಅಂಕಿತ ಹಾಕಿದ್ದಾರೆ' ಎಂದು ಸಚಿವ ಶಿಂದೆ ಸೋಮವಾರ ಸುದ್ದಿಗಾರರಿಗೆ ಹೇಳಿದರು.
'ಇತ್ತೀಚೆಗೆ ಕೆಲವು ಮೋಸ್ಟ್ ವಾಂಟೆಡ್ ಉಗ್ರರನ್ನು ಸದೆಬಡಿಸಿದ್ದೇವೆ. ಒಂದಿಬ್ಬರನ್ನು ನೇಣಿಗೂ ಹಾಕಿದ್ದೇವೆ. ಗಡಿ ಭಾಗದಲ್ಲೂ ಉಗ್ರರ ಉಪಟಳಕ್ಕೆ ತಕ್ಕ ಶಾಸ್ತಿಯಾಗಿದೆ. ಒಟ್ಟಾರೆಯಾಗಿ ಭಯೋತ್ಪಾದಕರ ವಿರುದ್ಧ ನಾವು ಮೇಲುಗೈ ಸಾಧಿಸಿದ್ದೇವೆ. ಈ ಸಂದರ್ಭದಲ್ಲಿ ದಾವೂದ್ ಇಬ್ರಾಹಿಂಗೆ ಸಂಬಂಧಪಟ್ಟಂತೆ ಅಮೆರಿಕದ FBI ಜತೆ ಕೈಜೋಡಿಸಿದ್ದೇವೆ. ಶೀಘ್ರವೇ ಅವನನ್ನೂ ಸದೆಬಡಿಯುವುದು ನಿಶ್ಚಿತ' ಎಂದು ಸಚಿವ ಶಿಂದೆ ಆಶಾಭಾವ ವ್ಯಕ್ತಪಡಿಸಿದರು.
'ನಿಮಗೆ ಅತ್ಯಗತ್ಯವಾಗಿ ಬೇಕಾಗಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿಕೊಂಡಿದ್ದಾನೆ' ಎಂದು ಇತ್ತೀಚೆಗೆ NIA ಪೊಲೀಸರಿಗೆ ಸಿಕ್ಕಿಬಿದ್ದ ಭೂಗತ ಪಾತಕಿ, ಕರ್ನಾಟಕದವನೇ ಆದ ಯಾಸಿನ್ ಭಟ್ಕಳ್ ತಿಳಿಸಿದ್ದಾನೆ.












Click it and Unblock the Notifications