ಸಿಬ್ಬಂದಿ ಪ್ರತಿಭಟನೆ, ವೋಲ್ವೋ ಬಸ್ ಸಂಚಾರವಿಲ್ಲ

ಮಂಗಳವಾರ ನಗರದಲ್ಲಿ ಬಿಎಂಟಿಸಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಆದರೆ, ಮೆಜೆಸ್ಟಿಕ್ ಡಿಪೋದಿಂದ ಹೊರಡುವ ವೋಲ್ವೋ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸಿಬ್ಬಂದಿಗಳು ಹೆಚ್ಚುವರಿ ವೇತನ(ಓ.ಟಿ) ನೀಡುವಂತೆ ಆಗ್ರಹಿಸಿ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿರುವ ಡಿಪೋ ಸಂಖ್ಯೆ 7ರ ನೌಕರರ ಜೊತೆ, ಡಿಪೋ ಮ್ಯಾನೇಜರ್ ಔರಾದ್ಕರ್ ನಡೆಸಿದ ಮಾತುಕತೆ ವಿಫಲವಾಗಿದ್ದು, ಸಂಚಾರ ಆರಂಭವಾಗಿಲ್ಲ. ಓ.ಟಿ ನೀಡುವ ಕುರಿತು ಕೇಂದ್ರ ಕಚೇರಿಯೊಂದಿಗೆ ಮಾತುಕತೆ ನಡೆಸುವುದಾಗಿ ಮ್ಯಾನೇಜರ್ ಭರವಸೆ ನೀಡಿದ್ದಾರೆ.
12 ಗಂಟೆಗೂ ಹೆಚ್ಚು ಕೆಲಸ ನಿರ್ವಹಿಸಿದರೂ ಕೇವಲ ಒಂದು ಗಂಟೆ ಓ.ಟಿ. ನೀಡಿರುವ ಕುರಿತು ಡಿಪೋ ಮ್ಯಾನೇಜರ್ ಮತ್ತು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸಿಬ್ಬಂದಿ ಪ್ರತಿಭಟನೆಯಿಂದಾಗಿ ವೋಲ್ವೋ ಸಂಚಾರ ರದ್ದಾಗಿದೆ.
ನಗರದಲ್ಲಿ ವಾಹನ ದಟ್ಟಣೆಯ ಸಮಸ್ಯೆ ಹೆಚ್ಚಾಗಿದೆ. ಬಸ್ ಆಗಮನ ಮತ್ತು ನಿರ್ಗಮನಕ್ಕೆ ಹಿಂದೆ ನಿಗದಿಪಡಿಸಿದ ಕಾಲಾವಧಿ ಅವೈಜ್ಞಾನಿಕವಾಗಿದೆ. ನೂತನವಾಗಿ ಸಮೀಕ್ಷೆ ನಡೆಸಿ ಹೊಸ ಕಾಲಾವಧಿ ನಿಗದಿಗೊಳಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ.
ವೇಳೆ ಮಹಿಳಾ ಸಿಬ್ಬಂದಿಗಳಿಗೂ ಸರಿಯಾದ ಪಾಳಿ ನಿಗದಿಗೊಳಿಸಬೇಕು. ವೇತನ ಹೆಚ್ಚಿಸಬೇಕು ಎಂದು ಸಿಬ್ಭಂದಿ ಬೇಡಿಕೆ ಮುಂದಿಟ್ಟಿದ್ದಾರೆ. ಸಿಬ್ಬಂದಿ ಬೇಡಿಕೆಗಳ ಕುರಿತು ಕೇಂದ್ರ ಕಚೇರಿಯೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಅಧಿಕಾರಿಗಳಿಂದ ಬೇಡಿಕೆ ಈಡೇರಿಸುವ ಭರವಸೆ ದೊರೆಯುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಸಿಬ್ಬಂದಿಗಳು ಹೇಳಿದ್ದು, ಪ್ರತಿಭಟನೆ ಮುಂದುವರೆದಿದೆ. ಮೆಜೆಸ್ಟಿಕ್ ನಲ್ಲಿ ವೋಲ್ವೋ ಬಸ್ ಗಳಿಗೆ ಕಾಯದೇ ಇರುವುದು ಉತ್ತಮ. (ಹೊಸ ಮಾರ್ಗಗಳಲ್ಲಿ ವೋಲ್ವೋ ಓಡಿಸಲಿದೆ ಬಿಎಂಟಿಸಿ)












Click it and Unblock the Notifications