ಚಾಮರಾಜನಗರಕ್ಕೆ ಹೋಗ್ತಾರಂತೆ ಸಿದ್ದರಾಮಯ್ಯ!
ಮೈಸೂರು, ಸೆ.8: ಮುಖ್ಯಮಂತ್ರಿಗಳ ಪಾಲಿಗೆ ಶಾಪಗ್ರಸ್ತ ಜಿಲ್ಲೆ ಎಂದೇ ಬಿಂಬಿತವಾಗಿರುವ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ನೀಡಿದ್ದಾರೆ.
ಭಾನುವಾರ ಮೈಸೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸವಾಲಿಗೆ ಪ್ರತಿಕ್ರಿಯೆ ನೀಡಿದರು. ನಾನು ಚಾಮರಾಜನಗರಕ್ಕೆ ಭೇಟಿ ನೀಡಿದ್ದರಿಂದಲೇ ಸಿಎಂ ಆಗಿದ್ದೇನೆ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 3ತಿಂಗಳು ಕಳೆದರೂ ಸಿದ್ದರಾಮಯ್ಯ, ಒಮ್ಮೆಯೂ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿಲ್ಲ, ಈ ಮೂಲಕ ತಾವು ಕೂಡ ಮೂಢನಂಬಿಕೆಯ ದಾಸರು ಎಂದು ಸಾಬೀತು ಮಾಡಿದ್ದಾರೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ದರು.
ಚೀನಾ ಪ್ರವಾಸ ಕೈಗೊಳ್ಳುವ ಬದಲು ಸಿಎಂ ಚಾಮರಾಜನಗರಕ್ಕೆ ಹೋಗಿ ಬಂದು, ತಾವು ಮೂಡನಂಬಿಕೆ ದಾಸರಲ್ಲ ಎಂದು ಸಾಬೀತು ಪಡಿಸುವಂತೆ ಶೆಟ್ಟರ್ ಸವಾಲು ಹಾಕಿದ್ದರು. ಶೆಟ್ಟರ್ ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಶೀಘ್ರವೇ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ ಎಂದು ಸಿಎಂ ಘೋಷಿಸಿದ್ದಾರೆ.
ನನಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಂತೆ ಚಾಮರಾಜನಗರವೂ ಒಂದು. ಅಲ್ಲಿಗೆ ತೆರಳಲು ನನಗೆ ಯಾವುದೇ ಅಂಜಿಕೆ ಇಲ್ಲ. ಮೂಡನಂಬಿಕೆಗಳು ಇಲ್ಲ. ನಾನು ಚಾಮರಾಜನಗರ ಜಿಲ್ಲೆಗೆ ಶೀಘ್ರವೇ ಭೇಟಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ-ಜೆಡಿಎಸ್ ಒಂದೇ : ತಮ್ಮ ತವರು ಕ್ಷೇತ್ರ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಉಭಯ ಪಕ್ಷಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು. (ಸಿದ್ದರಾಮಯ್ಯ ತವರು ಜಿಲ್ಲೆ ಆಡಳಿತ ಜೆಡಿಎಸ್ ಪಾಲು!)
ಎರಡೂ ಪಕ್ಷಗಳ ನಾಯಕರು ಒಳಗೊಂದು ಧೋರಣೆ, ಹೊರಗೊಂದು ಧೋರಣೆ ಅನುಸರಿಸುತ್ತಿದ್ದಾರೆ. ಇವರನ್ನು ನಂಬಿ ಮತ ನೀಡುವ ಜನರನ್ನು ವಂಚಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಯಾವ ಸಮಸ್ಯೆ ಬಗ್ಗೆ ರಾಜಕಾರಣಿಗಳು ತಲೆಕೆಡಿಸಿಕೊಳ್ಳುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ, ಹೊಸ ಸರ್ಕಾರ ರಚನೆಯಾದ ಬಳಿಕ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ವಿಚಾರ ಮಾತ್ರ ಬಹಳ ಚರ್ಚೆಗೆ ಗ್ರಾಸವಾಗುತ್ತದೆ. (ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್ ಓಪನ್ ಚಾಲೇಂಜ್)
ಜಗದೀಶ್ ಶೆಟ್ಟರ್ ಚಾಲೆಂಜ್ ಸ್ವೀಕರಿಸಿರುವ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಸಿಎಂ ಜಿಲ್ಲೆಗೆ ಭೇಟಿ ನೀಡಿ ಮರಳಿದ ನಂತರವೂ ಅವರು ಅಧಿಕಾರದಲ್ಲಿ ಮುಂದುವರೆದು, ಜಿಲ್ಲೆಗೆ ಅಂಟಿರುವ ಕಳಂಕ ದೂರಮಾಡುತ್ತಾರೋ? ಕಾದು ನೋಡಬೇಕು.


Click it and Unblock the Notifications
