ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ದಾಳಿ: ಕೊನೆಗೂ ಆರೋಪಿ ಸಿಕ್ಕಿ ಬಿದ್ದ

By Mahesh
|
Google Oneindia Kannada News

Bangalore Church attack, One accused held Bangalore
ಬೆಂಗಳೂರು, ಸೆ. 5: ನಗರದ ಸುತ್ತಮುತ್ತಲಿನ ಚರ್ಚ್ ಹಾಗೂ ಇನ್ನಿತರ ಕ್ರೈಸ್ತ ಧಾರ್ಮಿಕ ಮಂದಿರಗಳ ಮೇಲೆ ದಾಳಿ ನಡೆಸಿದ ಅರೋಪಿಯನ್ನು ಸುಮಾರು ಐದು ವರ್ಷಗಳ ನಂತರ ಕೊನೆಗೂ ಬಂಧಿಸಲಾಗಿದೆ.

ಬೆಂಗಳೂರಿನ ಹೊರ ವಲಯದ ಅತ್ತಿಬೆಲೆಯ ಯಡವನಹಳ್ಳಿ, ಹೆಬ್ಬಗೋಡಿಯ ಹುಸ್ಕೂರ್ ಗೇಟ್ ಬಳಿಯ ಕ್ರೈಸ್ತರ ಪ್ರಾರ್ಥನಾ ಮಂದಿರ ಸೇರಿ ನಾಲ್ಕು ಚರ್ಚ್ ಗಳ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ತಾಲೂಕಿನ ಮದಗೊಂಡನಪಲ್ಲಿಯ ನಿವಾಸಿ ಸಜ್ಜನ್ ಕುಮಾರ್ ಅಲಿಯಾಸ್ ಬಾಬು (33) ಎಂದು ಗುರುತಿಸಲಾಗಿದೆ.

ಆರೋಪಿ ಸಜ್ಜನ್ ಕುಮಾರ್ ಗೆ ಕ್ರೈಸ್ತ ಧರ್ಮಕ್ಕೆ ಸೇರುವಂತೆ ಫುಸಲಾಯಿಸಲಾಗಿದ್ದು, ಅನೇಕ ಆಮಿಷ ಒಡ್ಡಲಾಗಿತ್ತು. ಆದರೆ, ಸಜ್ಜನ್ ಯಾವುದೇ ಕಾರಣಾಕ್ಕೂ ಕ್ರೈಸ್ತಧರ್ಮಕ್ಕೆ ಮತಾಂತರವಾಗಲು ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಬಲವಂತ ಮತಾಂತರಕ್ಕೆ ವಿರೋಧಿಸಿ ಕ್ರೈಸ್ತರಿಗೆ ಪಾಠ ಕಲಿಸುವ ಉದ್ದೇಶದಿಂದ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯು ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಯಡವನಹಳ್ಳಿಯ ಚರ್ಚ್ ಕಟ್ಟಡದೊಳಗೆ ಪ್ರವೇಶಿಸಿ ಅಲ್ಲಿದ್ದ ಯೇಸುವಿನ ಪ್ರತಿಮೆ ಧ್ವಂಸಗೊಳಿಸಿದ್ದ.

2009ರಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹುಸ್ಕೂರ್ ಗೇಟ್ ಬಳಿಯ ಇನ್‌ಫಂಟ್ ಜೀಸಸ್ ಚರ್ಚ್ ಕಟ್ಟಡದೊಳಗೆ ಪ್ರವೇಶ ಮಾಡಿ ಭದ್ರತಾ ಕೊಠಡಿ ಜಖಂಗೊಳಿಸಿದ್ದ. ಅಲ್ಲದೆ ಕಟ್ಟಡದ ಕಿಟಕಿ ಗಾಜು ಪುಡಿಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಇನ್ನಿತರ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ. ಅಪರಾಧ ವಿಭಾಗದ ಡಿಸಿಪಿ ವಿ.ಎಸ್.ಡಿಸೋಜಾ, ಸಿಸಿಬಿ ಎಸಿಪಿ ಎಚ್.ಸಿದ್ದಪ್ಪ, ಎಚ್.ಸಿ.ಮಹದೇವ, ಪಿಸಿಗಳಾದ ದಿನೇಶ್ ಶೆಟ್ಟಿ, ಹರಿಶ್ಚಂದ್ರ, ರಂಜಿತ್ ಶೆಟ್ಟಿ ತನಿಖೆ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ನಡೆದ ಚರ್ಚ್ ದಾಳಿಗೆ ಸಂಬಂಧಿಸಿದಂತೆ ಸರಕಾರ ನೇಮಿಸಿದ್ದ ನ್ಯಾ. ಸೋಮಶೇಖರ್ ಆಯೋಗ ನೀಡಿದ ವರದಿಯನ್ನು ರಾಜ್ಯ ಕ್ರೈಸ್ತ ಸಮುದಾಯ ತಿರಸ್ಕರಿಸಿತ್ತು.

ಕ್ರೈಸ್ತ ಸಮುದಾಯದ ಮೇಲೆ ಮತಾಂತರದ ಆರೋಪ ಹೊರಿಸಲಾಗಿದೆ. ದಾಳಿ ಯಾರು ಮಾಡಿದ್ದಾರೆಂದು ಗುರುತಿಸಿಲ್ಲ. ಇದರಿಂದ ನಮ್ಮ ಸಮುದಾಯದ ಭಾವನೆಗೆ ನೋವುಂಟಾಗಿದೆ. ಹಾಗಾಗಿ ವರದಿಯನ್ನು ನಾವು ತಿರಸ್ಕರಿಸಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಆರ್ಚ್ ಬಿಷಪ್ ಬರ್ನಾಡ್ ಮೋರಸ್ ಹೇಳಿದ್ದರು.

ರಾಜ್ಯದ ವಿವಿಧ ಭಾಗದಲ್ಲಿ 2008ರಲ್ಲಿ ನಡೆದ ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸೋಮಶೇಖರ್ ಆಯೋಗ 2437 ಪುಟಗಳ ಸಮಗ್ರ ವರದಿಯನ್ನು ನೀಡಿತ್ತು.ಈ ಘಟನೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ರಾಜ್ಯದ ಮಂಗಳೂರು, ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ಬೆಳಗಾವಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚರ್ಚ್ ಮೇಲೆ ದಾಳಿ ನಡೆದಿತ್ತು.

English summary
Almost five years after attacks on various churches in and around the Bangalore, the city police have managed to nab a man Sajjan Kumar, alias Babu (33) who is responsible for attacking the religious institution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X