ಸೋನಿಯಾಗೆ ಸಂಕಷ್ಟ: ಅಮೆರಿಕ ಕೋರ್ಟ್ ಸಮನ್ಸ್
ನವದೆಹಲಿ, ಸೆ.4: ಸಿಖ್ ವಿರೋಧಿ ದಂಗೆಯಲ್ಲಿ ಭಾಗಿಯಾದ ಪಕ್ಷದ ನಾಯಕರನ್ನು ರಕ್ಷಿಸಿದ ಆರೋಪದ ಮೇಲೆ ನ್ಯೂಯಾರ್ಕ್ ಫೆಡರಲ್ ಕೋರ್ಟ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮನ್ಸ್ ಜಾರಿಗೊಳಿಸಿದೆ.
'ನ್ಯಾಯಕ್ಕಾಗಿ ಸಿಖ್ಖರು' (SFJ) ಮತ್ತು 1984ರ ಸಿಖ್ ವಿರೋಧಿ ದಂಗೆಯ ಇಬ್ಬರು ಬಾಧಿತರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ US Eastern District Court ಸೋನಿಯಾ ಗಾಂಧಿಗೆ ಬುಲಾವ್ ನೀಡಿದೆ.

ಸೋನಿಯಾ ಗಾಂಧಿ ಅವರು ಚಿಕಿತ್ಸೆಗೆಂದು ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಅಮೆರಿಕದ ಕಾನೂನು ಪ್ರಕಾರ ಸಮನ್ಸ್ ಅನ್ನು ಖುದ್ದಾಗಿ ಸೋನಿಯಾ ಅವರಿಗೆ ತಲುಪಿಸಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಕೇಂದ್ರ ಸಚಿವ ಕಮಲ್ ಪಂತ್ ಮುಂತಾದ ಕಾಂಗ್ರೆಸ್ ನಾಯಕರ ವಿರುದ್ಧವೂ SFJ ಈ ಹಿಂದೆ ಮೊಕದ್ದಮೆ ದಾಖಲಿಸಿತ್ತು.
ಮಾನವ ಜನಾಂಗದ ವಿರುದ್ಧ ಮಹಾಪರಾಧವೆಸಗಿದ ಕಾಂಗ್ರೆಸ್ ನಾಯಕರನ್ನು ಆ ಪಕ್ಷದ ಅಧಿನಾಯಕಿ ಸೋನಿಯಾ ಅವರು ರಕ್ಷಿಸಿದ್ದಾರೆ. ಹಾಗಾಗಿ, ಅವರಿಂದ ಪರಿಹಾರ ಕೋರುತ್ತಿದ್ದು, ದಂಡನಾರ್ಹ ಶಿಕ್ಷೆ ವಿಧಿಸಬೇಕು ಎಂದು ಅರ್ಜಿದಾರರು ಸೆಪ್ಟೆಂಬರ್ 3ರಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
30 ಸಾವಿರ ಸಿಖ್ಖರನ್ನು ಉದ್ದೇಶಪೂರ್ವಕವಾಗಿ ಹಿಂಸಿಸಿ, ಅತ್ಯಾಚಾರಕ್ಕೀಡು ಮಾಡಿ, ಸಾಯಿಸಿಲಾಗಿದೆ. ಇದನ್ನೆಲ್ಲಾ ಮಾಡಿರುವುದು, ನಿಯಂತ್ರಿಸಿರುವುದು, ಶಸ್ತ್ರಾಸ್ತ್ರ ಪೂರೈಸಿರುವುದು, ಉದ್ದೀಪನಗೊಳಿಸಿರುವುದು ಕಾಂಗ್ರೆಸ್ ಪಕ್ಷವೇ ಎಂದು ಆರೋಪಿಸಿ 27 ಪುಟಗಳ ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಿದೆ.












Click it and Unblock the Notifications