ಇನ್ನಷ್ಟು ಬೆಲೆ ಏರಿಕೆಗೆ ಸಿದ್ದರಾಗಿರಿ: ಮೊಯ್ಲಿ
ನವದೆಹಲಿ, ಸೆ.1 : ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಮತ್ತೊಮ್ಮೆ ಏರಿಕೆ ಕಂಡಿದೆ. ನೂತನ ದರಗಳು ಶನಿವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರಲಿದೆ. ಯುಪಿಎ ಸರ್ಕಾರ ಸತತ ಆರನೇ ಬಾರಿಗೆ ದರ ಏರಿಕೆ ಮಾಡಿದ ದಾಖಲೆ ಸೃಷ್ಟಿಸಿದೆ. ಇನ್ನಷ್ಟು ಬೆಲೆ ಏರಿಕೆಗೆ ಸಿದ್ದರಾಗಿರಿ ಎಂದು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಎಚ್ಚರಿಸಿದ್ದಾರೆ.
ರುಪಾಯಿ ಅಪಮೌಲ್ಯದ ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರವನ್ನು 2.35 ರು, ಡೀಸೆಲ್ ದರ ಪ್ರತಿ ಲೀಟರ್ ಗೆ 50 ಪೈಸೆ, ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ದರ 60 ರು ನಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃಉತ ದರಗಳು ತೆರಿಗೆ ರಹಿತ ಏರಿಕೆಯಾಗಿದ್ದು, ಆಯಾ ರಾಜ್ಯಗಳ ತೆರಿಗೆ ಸೇರಿಸಿದರೆ ಬೆಲೆ ಇನ್ನಷ್ಟು ದುಬಾರಿಯಾಗಲಿದೆ.
ಕಳೆದ ಜೂನ್ ನಿಂದ ಇಂದಿನವರೆಗೂ ಆರನೇ ಬಾರಿಗೆ ತೈಲೋತ್ಪನ್ನಗಳ ದರದಲ್ಲಿ ಏರಿಕೆ ಮಾಡಲಾಗುತ್ತಿದೆ. ವ್ಯಾಟ್ ಹೊರತುಪಡಿಸಿ ಪ್ರತಿ ಲೀಟರ್ ಪೆಟ್ರೋಲ್ ದರ 9.17ರಷ್ಟು ಹೆಚ್ಚಾಗಿದೆ. ಡೀಸೆಲ್ ಬೆಲೆ ಜನವರಿ 17ರಿಂದ ಇಲ್ಲಿ ತನಕ 8 ಬಾರಿ ಏರಿಕೆ ಕಂಡಿದೆ.

ದೇಶದ ಜನತೆಗೆ ಇನ್ನಷ್ಟು ಶಾಕ್ ನೀಡಲು ಯುಪಿಎ ಸರ್ಕಾರ ಸಿದ್ದತೆ ನಡೆಸಿದ್ದು, ಅಮೆರಿಕನ್ ಡಾಲರ್ ಸೇರಿದಂತೆ ವಿಶ್ವದ ಪ್ರಮುಖ ಕರೆನ್ಸಿಗಳ ಎದುರು ರುಪಾಯಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಿಯಾಯಿತಿ ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ, ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೊಮ್ಮೆ ಪರಿಷ್ಕರಿಸಬೇಕು ಎಂದು ಸಚಿವ ಎಂ.ವೀರಪ್ಪ ಮೊಯ್ಲಿ ಮನವಿ ಮಾಡಿದ್ದಾರೆ. [ರುಪಾಯಿ ಕುಸಿತದಿಂದ ಏನು ಕೇಡು ಇಲ್ಲಿ ಓದಿ]
ರಿಯಾಯಿತಿ ದರದಲ್ಲಿ ತೈಲೋತ್ಪನ್ನಗಳನ್ನು ಪೂರೈಸುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ 1,80,000 ಕೋಟಿ ನಷ್ಟ ಉಂಟಾಗಬಹುದು. ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲೇಬೇಕೆಂದು ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಒಂದು ವೇಳೆ ದರ ಹೆಚ್ಚಳ ಮಾಡದಿದ್ದರೆ ರಿಯಾಯಿತಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಮತ್ತು ಡೀಸೆಲ್ ಪೂರೈಕೆಗೆ 97,500 ಕೋಟಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ (ಎಲ್ಲಾ ದರಗಳು ಪ್ರತಿ ಲೀಟರ್ ಗೆ ಹಾಗೂ ತೆರಿಗೆ ರಹಿತ ಬೆಲೆ)
* ಪೆಟ್ರೋಲ್ ದರ 74.10 ರು
* ಡೀಸೆಲ್ 51.97 ರು
ಮುಂಬೈ
* ಪೆಟ್ರೋಲ್ ದರ 81.57 ರು
* ಡೀಸೆಲ್ 58.86 ರು
ಕೋಲ್ಕತ್ತಾ
* ಪೆಟ್ರೋಲ್ ದರ 81.57 ರು
* ಡೀಸೆಲ್ 56.33 ರು
ಚೆನ್ನೈ
* ಪೆಟ್ರೋಲ್ ದರ 77.48 ರು
* ಡೀಸೆಲ್ 55.37 ರು
ಬೆಂಗಳೂರು
* ಪೆಟ್ರೋಲ್ ದರ 78.12 ರು
* ಡೀಸೆಲ್ 56.89 ರು
ರುಪಾಯಿ ಕುಸಿತದಿಂದ ಪ್ರತಿ ಲೀಟರ್ ಡೀಸೆಲ್ ಮಾರಾಟದಿಂದ 10.22 ರು ನಷ್ಟು ನಷ್ಟವಾಗುತ್ತಿದೆ. ಜನವರಿಂದ ಈಚೆಗೆ ಪ್ರತಿ ಲೀಟರ್ ಗೆ 50 ಪೈಸೆಯಷ್ಟು ದರ ಹೆಚ್ಚಳ ಮಾಡಿದರೂ ಈ ನಷ್ಟ ಉಂಟಾಗುತ್ತಿದೆ. ಸೀಮೆ ಎಣ್ಣೆ ಮೇಲೆ ಪ್ರತಿ ಲೀಟರ್ ಗೆ 33.54 ರು, ಅಡುಗೆ ಅನಿಲ ಸಿಲಿಂಡರ್ ಮೇಲೆ 412 ರು ನಷ್ಟು ನಷ್ಟವಾಗುತ್ತಿದೆ ಎಂದು ಮೊಯ್ಲಿ ಹೇಳಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಪ್ರಸಕ್ತ ವರ್ಷ ನಷ್ಟದ ಪ್ರಮಾಣ 1.44 ಲಕ್ಷ ಕೋಟಿಗೆ ತಲುಪಬಹುದು ಎಂದು ಮೊಯ್ಲಿ ಅಂದಾಜು ಮಾಡಿದ್ದಾರೆ.












Click it and Unblock the Notifications