ರುಪಾಯಿ ಕುಸಿತ, ಇಂಧನ ಬೆಲೆ ಏರಿಕೆ ಖಚಿತ
ಬೆಂಗಳೂರು, ಆ.27: ರುಪಾಯಿ ಮೌಲ್ಯ ಕುಸಿದರೆ ಯಾವ ರೀತಿ ಹೊರೆ ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಈಗಾಗಲೇ ಅರಿವು ಮೂಡಿದೆ. ರುಪಾಯಿ ಮೌಲ್ಯ ಕುಸಿತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿತ್ತ ಸಚಿವ ಪಿ ಚಿದಂಬರಂ ಮತ್ತೊಮ್ಮೆ ಹೇಳಿದ್ದಾರೆ. ಮಂಗಳವಾರ ರುಪಾಯಿ ಮೌಲ್ಯ ಡಾಲರ್ ಎದುರು 66 ರು ಗೆ ಕುಸಿತ ಕಂಡಿದೆ. ಇದರ ಜತೆಗೆ ಡೀಸೆಲ್ ದರ ಏರಿಕೆ,ರೈಲು ಪ್ರಯಾಣ ದರ ಏರಿಕೆಯಾಗುವುದು ಖಚಿತವಾಗಿದೆ.
2008ರಲ್ಲಿ ಉಂಟಾದ ಆರ್ಥಿಕ ಕುಸಿತದಂಥ ಪರಿಸ್ಥಿತಿ ಎದುರಿಸಲು ಸರ್ಕಾರ ಕೈಗೊಂಡ ಕ್ರಮಗಳು ಪರೋಕ್ಷವಾಗಿ ವಾರ್ಷಿಕ ಮತ್ತು ಚಾಲ್ತಿ ವಿತ್ತೀಯ ಕೊರತೆಗೆ ಕಾರಣವಾಗಿದೆ. 2009 ರಿಂದ 11 ರ ತನಕ ಸರ್ಕಾರ ತೆಗೆದುಕೊಂಡ ಕೆಲವು ನಿರ್ಣಯಗಳು ಆರ್ಥಿಕ ಸುಭದ್ರತೆ ಒದಗಿಸುವ ಜತೆಗೆ ರುಪಾಯಿ ಅಪಮೌಲ್ಯಕ್ಕೂ ಕಾರಣವಾಯಿತು. ಆದರೆ, ಪರಿಸ್ಥಿತಿ ಕೈ ಮೀರಿಲ್ಲ ಎಂದು ಚಿದಂಬರಂ ಹೇಳಿದ್ದಾರೆ.
ರುಪಾಯಿ ಮೌಲ್ಯ ಕುಸಿತ, ವಿತ್ತೀಯ ಕೊರತೆ ನೀಗಿಸಲು ಹಲವು ಕ್ರಮಗಳನ್ನು ಈಗಾಗಲೆ ತೆಗೆದುಕೊಳ್ಳಲಾಗಿದೆ. ಚಂದ್ರಶೇಖರ್ ಸಮಿತಿ ವರದಿ ಆಧಾರದ ಮೇಲೆ ಸೆಬಿ ನೀಡಿರುವ ಅಗತ್ಯ ಕ್ರಮಗಳನ್ನು ಪಾಲಿಸಲು ಮಾರ್ಗ ಸೂಚಿ ಸಿದ್ದವಾಗಿದೆ. ಅನಿಲ ದರ, ಎಫ್ ಡಿಐ ಮಿತಿ, ಕಲ್ಲಿದಲು ಗೊಂದಲ ಅಂತ್ಯಗೊಂಡಿದೆ ಎಂದು ವಿತ್ತ ಸಚಿವ ಚಿದಂಬರಂ ಭರವಸೆ ನೀಡಿದ್ದಾರೆ.
ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ. ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಸೂಚ್ಯಂದ 600 ಅಂಕಗಳಷ್ಟು ಕುಸಿತ ಕಂಡಿದೆ. ಐಟಿ ಕಂಪನಿಗಳ ಷೇರುಗಳು ಬಿಟ್ಟರೆ ಮಿಕ್ಕ ಎಲ್ಲಾ ಕ್ಷೇತ್ರಗಳ ಷೇರುಗಳು ಡಲ್ ಹೊಡೆಯುತ್ತಿವೆ. ರುಪಾಯಿ ಅಪಮೌಲ್ಯದಿಂದ ಜನಸಾಮಾನ್ಯರಿಗೆ ಉಂಟಾಗುವ ತೊಂದರೆಗಳು ಇಂತಿವೆ

ಇಂಧನ ಬೆಲೆ ಏರಿಕೆ
ಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ತೈಲ ಬೆಲೆ ಏರಿಕೆ ಖಂಡಿತ. ನಮ್ಮ ತೈಲ ಕಂಪನಿಗಳು +/- 66 ರು ಪ್ರತಿ ಡಾಲರ್ ನಂತೆ ನೀಡಬೇಕಾಗುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ $110.96 ನಷ್ಟಿದೆ. 32,500 ರು ಪ್ರತಿ ಬ್ಯಾರೆಲ್ ಗೆ ನೀಡಿ ನಮ್ಮ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಇಂಧನಗಳನ್ನು ತುಂಬಿಸಿಕೊಳ್ಳುತ್ತಿವೆ.ಹೀಗಾಗಿ ಪೆಟ್ರೋಲ್, ಡೀಸೆಲ್ ಇನ್ನಿತರ ಇಂಧನ ದರ ಏರಿಕೆಗೆ ತಯಾರಾಗಿ. ರುಪಾಯಿ ಮೌಲ್ಯ ಕುಸಿದಾಗ ಇಂಧನ ದರ ಏರಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜನ ಸಾಮಾನ್ಯರಿಗೆ ಇದು ಮೊದಲ ಹೊಡೆತ.
ಹಣ ದುಬ್ಬರ ಏರಿಕೆ
ಇಂಧನ ದರ ಏರಿಕೆಯಾಗುತ್ತಿದ್ದಂತೆ ಸರಕು ಸಾರಿಗೆ ವೆಚ್ಚ ದುಬಾರಿಯಾಗುತ್ತದೆ. ದಿನ ನಿತ್ಯ ಬಳಸುವ ತರಕಾರಿ, ಹಣ್ಣು ಹಂಪಲು ಬೆಲೆ ಗಗನಕ್ಕೇರುತ್ತದೆ. ಈಗಾಗಲೇ ತರಕಾರಿ ಬೆಲೆ ಏರಿಕೆಯಿಂದ ಜನ ಕಷ್ಟಪಡುತ್ತಿದ್ದಾರೆ.
ಆಹಾರ ಹಾಗೂ ರೀಟೈಲ್ ಕ್ಷೇತ್ರದ ಎಲ್ಲಾ ಉತ್ಪನ್ನಗಳ ಬೆಲೆ ಏರಿಕೆ ಖಾತ್ರಿ. ಡಾಲರ್ ಎದುರು ರುಪಾಯಿ ಮೌಲ್ಯ ಶೇ 10 ರಷ್ಟು ಕುಸಿದರೂ ಹಣ ದುಬ್ಬರ ದರ ಶೇ 0.60 ರಷ್ಟು ಏರಿಕೆಯಾಗುತ್ತದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಜೊತೆ ಪ್ರತಿ ರಾಜ್ಯಗಳ ಪ್ರತ್ಯೇಕ ವ್ಯಾಟ್ ತೆರಿಗೆ ಸೇರಿ ನಿತ್ಯ ತುತ್ತು ಎತ್ತಲು ಭಾರಿ 'ಬಿಲ್' ತೆರಬೇಕಾಗುತ್ತದೆ.
ರೈಲು ದರ ಏರಿಕೆ
ಪ್ರತಿ ಲೀಟರ್ ಡೀಸೆಲ್ ಗೆ 10 ರು ಏರಿಕೆ ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ರೈಲು ಪ್ರಯಾಣ ದರ ಪರಿಷ್ಕರಣೆಗೆ ಮುಂದಾಗಿದೆ. ಮುಂಗಾರು ಅಧಿವೇಶನದ ನಂತರ ಹೊಸ ದರ ಪಟ್ಟಿ ಹೊರಬೀಳಲಿದೆ.
ವಿತ್ತೀಯ ಕೊರತೆ ನೀಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ವಿತ್ತ ಸಚಿವಾಲಯ ಹೇಳಿದೆ. ಆದರೆ, ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಪ್ರತಿ ತಿಂಗಳು 40 ರಿಂದ 50 ಪೈಸೆಯಂತೆ ಡೀಸೆಲ್ ದರ ಏರಿಸಿದರೆ ಸಾಕು ಎಂದಿವೆ. ಬಹುತೇಕ ಅಕ್ಟೋಬರ್ ವೇಳೆಗೆ ದರ ಏರಿಕೆ ಸಾಧ್ಯತೆಯಿದೆ.

ಬಡ್ಡಿದರ ಏರಿಕೆ
ಹಣದುಬ್ಬರ ಏರಿಕೆಯಾಗುತ್ತಿದ್ದಂತೆ ಆರ್ ಬಿಐ ಬಲವಂತವಾಗಿ ಹೆಚ್ಚಿನ ಬಡ್ಡಿದರ ಬಯಸುತ್ತದೆ. ಮನೆ, ಕಾರು ಕೊಳ್ಳುವ ಕನಸು ಹೊತ್ತು ಸಾಲ ಪಡೆಯಲು ಯೋಜನೆ ಹಾಕಿಕೊಂಡವರಿಗೆ ಭಾರಿ ಹೊಡೆತ ಬೀಳಲಿದೆ. ವೈಯಕ್ತಿಕ ಸಾಲ, ಗೃಹಸಾಲ ಎಲ್ಲಾ ರೀತಿಯ ಸಾಲಗಳ ಬಡ್ಡಿದರ ಏರಿಕೆಯಾಗಲಿದೆ.

ಚಿನ್ನದ ದರ ಏರಿಕೆ
ಚಿನ್ನದ ದರ ಏರಿಕೆ ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಚಿನ್ನದ ಮೇಲೆ ಹೂಡಿಕೆ ಸದ್ಯಕ್ಕೆ ಬೇಡ ಎಂದು ಕಿವಿಮಾತು ಹೇಳಲಾಗಿದೆ. ಆದರೂ ಧೈರ್ಯ ಮಾಡಿ ಚಿನ್ನ ಖರೀದಿ ಮಾಡಲು ಮುಂದಾದರೆ 10 ಗ್ರಾಂ ಚಿನ್ನದ ದರ ಬೆಲೆ ಕಂಡು ಹೌಹಾರಬೇಕಾಗುತ್ತದೆ.
ಕಾರಣ,ಭಾರತ ಅತಿ ಹೆಚ್ಚು ಚಿನ್ನವನ್ನು ಅಮದು ಮಾಡಿಕೊಳ್ಳುತ್ತದೆ. ಈಗ ಆಮದು ಚಿನ್ನದ ಸುಂಕ ಕೂಡಾ ಹೆಚ್ಚಳವಾಗಿದೆ. ಹೆಚ್ಚು ಡಾಲರ್ ತೆತ್ತು ಚಿನ್ನವನ್ನು ಖರೀದಿಸಿದ ಮೇಲೆ ಸ್ಥಳೀಯ ಚಿನ್ನದ ಬೆಲೆ ಏರಿಸುವುದು ಅನಿವಾರ್ಯವಾಗಲಿದೆ.

ಅಭಿವೃದ್ಧಿ ಕುಂಠಿತ
ದೇಶದ ವಿತ್ತೀಯ ಕೊರತೆ ನಿವಾರಣೆ ಆಗದಿದ್ದರೆ, ಹಣ ದುಬ್ಬರ ಏರುತ್ತಿದ್ದರೆ, ಬಡ್ಡಿದರ ಹೊರೆಯಾದರೆ, ದೈನಂದಿನ ವ್ಯವಹಾರ ತುಂಬಾ ದುಬಾರಿಯಾದರೆ ಅಭಿವೃದ್ಧಿ ತಾನೇ ತಾನಾಗಿ ಕುಂಠಿತಗೊಳ್ಳುತ್ತದೆ. ಆಗ ಜನ ಸಾಮಾನ್ಯರ ಉಳಿತಾಯಕ್ಕೆ ಕತ್ತರಿ ಬೀಳುತ್ತದೆ. ಇದರ ಪರಿಣಾಮ ನೇರವಾಗಿ ಹೂಡಿಕೆ ಹಾಗೂ ಅಭಿವೃದ್ಧಿಯ ಮೇಲಾಗುತ್ತದೆ. ಜನ ಸಾಮಾನ್ಯರ ಆರ್ಥಿಕ ಜೀವನ ಮಟ್ಟ ಸುಧಾರಣೆ ಕನಸಾಗೇ ಉಳಿಯುತ್ತದೆ.












Click it and Unblock the Notifications