ಬಂಧಿಸಿದರೆ ಉಪವಾಸ ಮಾಡ್ತ್ತೀನಿ, ಬಾಪು ಬೆದರಿಕೆ
ಜಲಂಧರ್, ಆ. 27: ಸ್ವಯಂಘೋಷಿತ ದೇವ ಮಾನವ ಅಸಾರಾಮ್ ಬಾಪು ಅವರಿಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ ಬೆನ್ನಲ್ಲೇ ಬಾಪು ಬೆದರಿಕೆಯೊಡ್ಡಿದ್ದಾರೆ. ನನ್ನನ್ನು ಬಂಧಿಸಿದರೆ ಮುಂದೆ ಆಗುವ ಅನಾಹುತಕ್ಕೆ ನೀವೇ ಹೊಣೆ ಎಂದು ಎಚ್ಚರಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಅಸಾರಾಮ್ ಬಾಪು ಅವರಿಗೆ ಸಮನ್ಸ್ ನೀಡಲು ಬಂದಿದ್ದ ಜೋಧಪುರ ಪೊಲೀಸರಿಗೆ ಬಾಪು ಬೆದರಿಕೆ ಒಡ್ಡಿದ್ದಾರೆ. ಲೈಂಗಿಕ ದೌರ್ಜನ್ಯ ಎಲ್ಲವೂ ಕಟ್ಟುಕತೆ ನನ್ನ ವಿರುದ್ಧ ಮಾಡಿರುವ ವ್ಯವಸ್ಥಿತಿ ಪಿತೂರಿ ಎಂದು ಅಸಾರಾಮ್ ಸ್ಪಷ್ಟವಾಗಿ ಹೇಳಿದ್ದಾರೆ.
ನನ್ನನ್ನು ಬಲವಂತವಾಗಿ ಬಂಧಿಸಿದರೆ ನಾನು ಆಹಾರ ನೀರು ಸೇವನೆ ಬಿಡುತ್ತೇನೆ. ಜನ ರೊಚ್ಚಿಗೇಳುತ್ತಾರೆ. ನನ್ನ ಬಂಧನವಾದರೆ ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಬಾಪು ಹೇಳಿದ್ದಾರೆ.

ಈ ನಡುವೆ ಸಂಘಪರಿವಾರ, ಬಿಜೆಪಿ ಹಾಗೂ ಇತರ ಬಲಪಂಥೀಯ ಹಿಂದೂ ಸಂಘಟನೆಗಳು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಅಸಾರಾಮ್ ಬಾಪು ಬೆಂಬಲಕ್ಕೆ ನಿಂತಿದೆ. [ಅಸಾರಾಮ್ ಬಾಪು ಟಾಪ್ 10 ವಿವಾದಗಳನ್ನು ಓದಿ]
ಸಾಮಾಜಿಕವಾಗಿ ಸಕ್ರಿಯರಾಗಿ ಮತಾಂತರದ ವಿರುದ್ಧ ಹೋರಾಟ ಮಾಡುತ್ತಿದ್ದ ಹಿಂದೂ ಸಂತ ಅಸಾರಾಮ್ ರನ್ನು ಕಾಂಗ್ರೆಸ್ ಪಕ್ಷ ಗುರಿಯಾಗಿಸಿ ಕೊಂಡಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.
ಜಿಲ್ಲಾ ಕಚೇರಿಯ ಹೊರಗಡೆ ಅಸಾರಾಮ್ ಬೆಂಬಲಿಸಿ ಧರಣಿ ನಡೆಸಿದ ವಿಎಚ್ ಪಿ ಹಾಗೂ ಬಜರಂಗದಳ, ಅವರನ್ನು ಕುತಂತ್ರದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಹಾಗೂ ಅವರ ಜನಪ್ರಿಯತೆಗೆ ಕಳಂಕ ತರಲು ಕಾಂಗ್ರೆಸ್ ನಡೆಸುತ್ತಿದೆ ಎಂದು ಆಪಾದಿಸಿದೆ.
ಈ ಹಿಂದೆ ಕಾಂಗ್ರೆಸ್ ಸರಕಾರ ಬಾಬಾರಾಮ್ ದೇವ್ ವಿರುದ್ಧ ಬಾಣ ಬೀಸಿತ್ತು. ಈಗ ಅಸಾರಾಮ್ ತೇಜೋವಧೆಗೆ ಅದು ಶ್ರಮಿಸುತ್ತಿದೆ ಎಂದು ಪ್ರತಿಭಟಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಬಳಿಕ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮಾಹಿತಿ ಹಾಗೂ ಸಂಪರ್ಕ ಸಚಿವ ಮನೀಶ್ ತಿವಾರಿಯವರಿಗೆ ಮನವಿ ಸಲ್ಲಿಸ ಲಾಗಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಮ್ ಬಾಪು ಅವರನ್ನು ಮುಂದಿನ ನಾಲ್ಕು ದಿನದೊಳಗೆ ನಮ್ಮ ಕಚೇರಿಗೆ ಬರುವಂತೆ ಸಮನ್ಸ್ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆ ಪಡೆಯಬೇಕಿದೆ ಎಂದು ಜೋಧ್ ಪುರದ ಡಿಸಿಪಿ(ಪಶ್ಚಿಮ) ಅಜಯ್ ಪಾಲ್ ಲಂಬಾ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 376, 342, 506 ಹಾಗೂ 509 ಹಾಗೂ ಐಪಿಸಿ ಸೆಕ್ಷನ್ 8 ರ ಪ್ರಕಾರ ಅಪ್ರಾಪ್ತ ಮೇಲೆ ದೌರ್ಜನ್ಯ ವಿರೋಧಿ ಕಾಯ್ದೆ(POSCO) ಹಾಗೂ ಅಪ್ತಾಪ್ರ ಕಾನೂನು ಕಾಯ್ದೆ ಸೆಕ್ಷನ್ 23, 26 ಅನ್ವಯ ಬಾಪು ವಿರುದ್ಧ ಕೇಸು ದಾಖಲಿಸಲಾಗಿದೆ.(ಪಿಟಿಐ)












Click it and Unblock the Notifications