ಮುಂಬೈ ರೇಪಿಸ್ಟುಗಳು ಈ ಹಿಂದೆಯೂ 4ರೇಪ್ ಮಾಡಿದ್ದರು
ಮುಂಬೈ, ಆಗಸ್ಟ್ 26: ಮುಂಬೈ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತಿಕ್ರೌರ್ಯವಾಗಿ ಅತ್ಯಾಚಾರ ಮಾಡಿರುವ ಆರೋಪಿಗಳು ಅತ್ಯಾಚಾರ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದರಂತೆ!
ಶಕ್ತಿ ಮಿಲ್ಸ್ ಎಂಬ ವಿಶಾಲವಾದ ಪಾಳುಬಿದ್ದ ಗಿರಣಿ ಪ್ರದೇಶವನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ಪಾಪಿಗಳು ತಮ್ಮ ದಾಹ ತೀರಿಸಿಕೊಳ್ಳಲು ಚಿಂದಿ ಆಯುವ ಯುವತಿಯರ ಮೇಲೆ ಮುಗಿಬೀಳುತ್ತಿದ್ದರು. ಆದರೆ ಯಾವುದೇ ಪ್ರಕರಣವೂ ಬಯಲಿಗೆ ಬಂದಿರಲಿಲ್ಲ.

ಇದರಿಂದ ಭಂಡ ಧೈರ್ಯದಲ್ಲಿದ್ದ ಪಾಪಿಗಳು ಪತ್ರಿಕಾ ಛಾಯಾಗ್ರಾಹಕಿ ಮೇಲೂ ಕ್ರೌರ್ಯ ಮೆರೆದಿದ್ದಾರೆ. ಆದರೆ ಸದರಿ ಯುವತಿ ಪ್ರಕರಣವನ್ನು ಧೈರ್ಯವಾಗಿ ಬಹಿರಂಗಗೊಳಿಸುವ ಮೂಲಕ ಪಾಪಿಗಳನ್ನು ಬಯಲಿಗೆಳೆದು, ಅವರ ಆಟಾಟೋಪಕ್ಕೆ ಬ್ರೇಕ್ ಹಾಕಿದ್ದಾಳೆ.
22 ವರ್ಷದ ಪತ್ರಿಕಾ ಛಾಯಾಗ್ರಾಹಕಿ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಆರೋಪಿ ಖಾಸೀಂ ಬಂಗಾಲಿ ಪೊಲೀಸರೆದುರು ತನ್ನ ತಂಡದ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದು, ಈ ಹಿಂದೆಯೂ ಇದೇ ಪಾಳುಬಿದ್ದ ಜಾಗದಲ್ಲಿ ಇಂತಹ ಕೃತ್ಯಗಳನ್ನು ಎಸಗಿದ್ದಾಗಿ ಬಾಯ್ಬಿಟ್ಟಿದ್ದಾನೆ. ಕಳೆದೊಂದು ವರ್ಷದಲ್ಲಿ ನಾಲ್ಕಾರು ಯುವತಿಯರ ಮೇಲೆ ರೇಪ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಇದೇ ಅಲ್ಲದೆ, ಏಕಾಂತ ತಾಣವನ್ನರಸಿ ಶಕ್ತಿ ಮಿಲ್ಸ್ ಜಾಗಕ್ಕೆ ಬರುವ ಜೋಡಿಗಳನ್ನೂ ತಮ್ಮ ತಂಡದವರು ಗೋಳು ಹೊಯ್ದುಕೊಳ್ಳುತ್ತಿದ್ದಾಗಿ ಭಾನುವಾರ ದೆಹಲಿಯಲ್ಲಿ ಬಂಧನಕ್ಕೊಳಗಾದ ಖಾಸೀಂ ಬಂಗಾಲಿ ಪೊಲೀಸರಿಗೆ ತಿಳಿಸಿದ್ದಾನೆ.












Click it and Unblock the Notifications