ಮುಂಬೈ ಅತ್ಯಾಚಾರ : ಮತ್ತೊಬ್ಬ ಆರೋಪಿಯ ಬಂಧನ
ಮುಂಬೈ, ಆ. 24 : ಫೋಟೋ ಜರ್ನಲಿಸ್ಟ್ ಮೇಲೆ, ದೆಹಲಿ ಲೈಂಗಿಕ ದೌರ್ಜನ್ಯದ ರೀತಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆನ್ನಲಾದ ಐವರಲ್ಲಿ ಎರಡನೆಯವನನ್ನು ಶನಿವಾರ ಬೆಳಗಿನ ಜಾವ ಬಂಧಿಸುವಲ್ಲಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ. ಉಳಿದ ಮೂವರಿಗಾಗಿ ಭಾರೀ ಬಲೆ ಬೀಸಲಾಗಿದೆ.
ಎರಡನೇ ಆರೋಪಿ ವಿಜಯ್ ಜಾಧವ್‌ನನ್ನು ಕ್ರೈಂ ಬ್ರಾಂಚ್ ಪೊಲೀಸರು ಮದನಪುರದಲ್ಲಿ ಬಂಧಿಸಿದರು. ಶುಕ್ರವಾರ ನಿರುದ್ಯೋಗಿಯಾಗಿರುವ ಚಾಂದ್ ಬಾಬು ಸತ್ತತ್ ಶೇಖ್ ಅಲಿಯಾಸ್ ಮೊಹಮ್ಮದ್ ಅಬ್ದುಲ್ (19) ಎಂಬಾತನನ್ನು ಬಂಧಿಸಿದ್ದರು. ಆತನೇ ಉಳಿದ ನಾಲ್ವರ ಹೆಸರನ್ನು ಬಹಿರಂಗಪಡಿಸಿದ್ದ. ಉಳಿದ ಮೂವರು ಕಾಸಿಮ್ ಬೆಂಗಾಲಿ, ಸಲೀಮ್ ಮತ್ತು ಅಶ್ಫಾಕ್ ತಲೆಮರೆಸಿಕೊಂಡಿದ್ದಾರೆ.
ಸುದ್ದಿ ಸಂಗ್ರಹಣೆ ಮತ್ತು ಫೋಟೋ ತೆಗೆಯಲೆಂದು ನಿರ್ಜನ ಸ್ಥಳದಲ್ಲಿರುವ ಶಕ್ತಿ ಮಿಲ್ಸ್ ಕಾಂಪೌಂಡ್‌ಗೆ ಅತ್ಯಾಚಾರಕ್ಕೊಳಗಾದ 22ರ ಛಾಯಾಪತ್ರಕರ್ತೆ ತನ್ನ ಸಹೋದ್ಯೋಗಿಯೊಂದಿಗೆ ತೆರಳಿದ್ದಾಗ, ಮೇಲೆ ತಿಳಿಸಿರುವ ಐವರು ದುರುಳರು, ಸಹೋದ್ಯೋಗಿಯನ್ನು ಥಳಿಸಿ, ಕಟ್ಟಿಹಾಕಿ, ಯುವತಿಯನ್ನು ಅಮಾನುಷವಾಗಿ ಅತ್ಯಾಚಾರಕ್ಕೆ ಒಳಪಡಿಸಿದ್ದರು.
ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿರುವ ಯುವತಿಯನ್ನು ಮುಂಬೈನ ಜಸಲೋಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಆದರೆ, ಆಕೆ ಆಂತರಿಕವಾಗಿ ಹಲವಾರು ಗಾಯಗಳಿಂದ ಬಳಲುತ್ತಿದ್ದಾಳೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ನಡುವೆ ಮುಂಬೈನಲ್ಲಿ ಮತ್ತು ದೇಶದ ಇತರ ಪ್ರದೇಶಗಳಲ್ಲಿ, ಅತ್ಯಾಚಾರಿಗಳ ವಿರುದ್ಧ ಕಠಿಣಾತಿಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒಕ್ಕೊರಲ ದನಿ ಎದ್ದಿದೆ.

ದುರುಳರಿಗೆ ಜೀವಾವಧಿ ಶಿಕ್ಷೆ : ಯುವತಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಆಘಾತಕ್ಕೊಳಗಾಗಿದ್ದರೂ ಮಾತನಾಡುವ ಸ್ಥಿತಿಯಲ್ಲಿದ್ದಾರೆ. ಎಲ್ಲ ಐವರು ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿಬೇಕು. ಇಂಥ ಘಟನೆ ಇನ್ನೆಂದೂ ಭಾರತದಲ್ಲಿ ನಡೆಯಬಾರದು ಎಂದು ತನ್ನ ತಾಯಿಯೊಂದಿಗೆ ಹೇಳಿದ್ದಾಳೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ದಿಗ್ಭ್ರಮೆ
"ನನಗೆ ಈ ಘಟನೆಯಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ. ಇಂಥ ಘಟನೆ ನಡೆದಿರುವುದು ನಿಜಕ್ಕೂ ದುರದೃಷ್ಟಕರ" ಎಂದು ದೆಹಲಿಯಲ್ಲಿ ರಾಷ್ಟ್ರೀಯ ಮಾಧ್ಯಮ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಫೋಟೋ ಜರ್ನಲಿಸ್ಟ್ ಸಂಘದಿಂದ ಪ್ರತಿಭಟನೆ
ವೃತ್ತಿನಿರತ ಸುದ್ದಿ ಛಾಯಾಪತ್ರಕರ್ತರ ಸಂಘ ಶನಿವಾರ ಪ್ರತಿಭಟನೆ ನಡೆಸಿ, ಗುರುವಾರ ಸಂಜೆ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಮಹಿಳೆಯರು ಮನೆಯೊಳಗೆ ಮತ್ತು ಹೊರಗೆ ಸುರಕ್ಷಿತವಾಗಿರಬೇಕು. ಯುವತಿಯರು ಪತ್ರಿಕೋದ್ಯಮ ಸೇರದಂತೆ ಇಂಥ ಘಟನೆಗಳು ಕಾರಣವಾಗಬಾರದು ಎಂದು ಆಗ್ರಹಿಸಿದ್ದಾರೆ.

ಲಖನೌದಲ್ಲಿ ಛಾಯಾಪತ್ರಕರ್ತರ ಆಕ್ರೋಶ
ಉತ್ತರ ಪ್ರದೇಶದ ಲಖನೌದಲ್ಲಿ ಶುಕ್ರವಾರ ಸಂಜೆ ಕ್ಯಾಂಡಲ್ ಬೆಳಗಿ, ಅತ್ಯಾಚಾರಕ್ಕೊಳಗಾದ ಮುಂಬೈನ ಛಾಯಾಪತ್ರಕರ್ತೆ ಪರವಾಗಿ ಪ್ರತಿಭಟನೆ ನಡೆಸಿದರು. ಮಾತಿಗಿಂತ ಅವರಲ್ಲಿ ಮಡುಗಟ್ಟಿದ್ದ ದುಃಖ ಮತ್ತು ಮೌನವೇ ಎಲ್ಲವನ್ನೂ ಹೇಳುತ್ತಿತ್ತು.

ಸಾಂಗ್ಲಿಯಲ್ಲಿ ಯುವತಿಯರ ವಿನೂತನ ಪ್ರತಿಭಟನೆ
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕೂಡ ಪ್ರತಿಭಟನೆಯ ದನಿ ಎದ್ದಿದೆ. ಕಾಲೇಜು ವಿದ್ಯಾರ್ಥಿನಿಯರು ಪಂಜರದಲ್ಲಿ ಯುವತಿಯೊಬ್ಬಳನ್ನು ಕೂಡಿಸಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮುಂಬೈನಲ್ಲಿ ನಡೆದ ಅತ್ಯಾಚಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಲೈಂಗಿಕ ದೌರ್ಜನ್ಯ ನಡೆದ ಸ್ಥಳ
ನಿರ್ಜನ ಸ್ಥಳವಾಗಿರುವ ಶಕ್ತಿ ಮಿಲ್ ಕಾಂಪೌಂಡ್ ಸ್ಥಳ ಇಂಥ ಅನಾಚಾರಗಳಿಗೆ ಹೇಳಿ ಮಾಡಿಸಿದಂಥ ಸ್ಥಳವಾಗಿದೆ. ದುರಾದೃಷ್ಟವಶಾತ್ ಯುವತಿ ತನ್ನ ಸಹೋದ್ಯೋಗಿಯೊಂದಿಗೆ ಗುರುವಾರ ಸಂಜೆ ಈ ಸ್ಥಳಕ್ಕೆ ತೆರಳಿದ್ದಾರೆ. ಈ ದುರಂತ ಘಟನೆ ಇಡೀ ದೇಶದ ಮಹಿಳೆಯರನ್ನೇ ಬೆಚ್ಚಿಬೀಳಿಸಿದೆ.

ಅತ್ಯಾಚಾರಿಗಳಿಗೆ ಮರಣದಂಡನೆ ನೀಡಿ
ಸಾಮೂಹಿಕವಾಗಿ ಅತ್ಯಾಚಾರ ಮಾಡುವವರನ್ನು ಫಾಶಿ (ಗಲ್ಲು) ಶಿಕ್ಷೆಗೆ ಗುರಿಪಡಿಸಬೇಕು ಎಂದು ಶಿವಸೇನೆಯ ಮಹಿಳಾ ಘಟಕ ಮುಂಬೈನಲ್ಲಿ ಭಾರೀ ಪ್ರತಿಭಟನೆ ನಡೆಸಿತು. ಅತ್ಯಾಚಾರ ಮಾಡುವವರಿಗೆ ಫಾಶಿ ಆಗಲೇಬೇಕು ಎಂಬ ಘೋಷಣೆಗಳನ್ನು ಅವರು ಕೂಗಿದರು. ಹಲವಾರು ಸಂಘಟನೆಗಳು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ.












Click it and Unblock the Notifications