ಪ್ರೇಮ ಪ್ರಕರಣ: ಜಕ್ಕಸಂದ್ರದಲ್ಲಿ ಪ್ರಿಯಕರನ ಹತ್ಯೆ

ಶಿವಶಂಕರ್ ರೆಡ್ಡಿ (20) ಪ್ರೇಮ ಪ್ರಕರಣಕ್ಕೆ ಬಲಿಯಾದ ಯುವಕ. ಕೋರಮಂಗಲ 7ನೆ ಬ್ಲಾಕ್ ನಲ್ಲಿರುವ ಡೊಕೊಮೊ ಮೊಬೈಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಶಂಕರ್ ರೆಡ್ಡಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.
ನಿನ್ನೆ ರಾತ್ರಿ 7 ಗಂಟೆ ಸಮಯದಲ್ಲಿ ಕೆಲಸ ಮುಗಿಸಿದ ಮೇಲೆ ಸಹೋದ್ಯೋಗಿ ಪ್ರಶಾಂತ್ ಜತೆ ಶಿವಶಂಕರ್ ರೆಡ್ಡಿ ಮನೆಗೆ ಹೋಗುವಾಗ ಜಕ್ಕಸಂದ್ರ ಬಳಿ ಶಿವಶಂಕರನ ಸ್ನೇಹಿತೆಯೊಬ್ಬಳು ಸಿಕ್ಕಿದ್ದಾಳೆ. ಆ ಸಂದರ್ಭದಲ್ಲಿ ಪ್ರಶಾಂತ್ ಸ್ವಲ್ಪ ದೂರದಲ್ಲಿ ನಿಂತಿದ್ದಾನೆ. ಅದೇ ವೇಳೆಗೆ ಶಿವಶಂಕರನ ಮೊಬೈಲಿಗೆ ಕರೆ ಬಂದಿದ್ದು, ಆತ ಮಾತನಾಡಲು ಪಕ್ಕಕ್ಕೆ ಹೋದಾಗ ಆಟೋ ರಿಕ್ಷಾದಲ್ಲಿ ಬಂದವರು ಆತನನ್ನು ಅಪಹರಿಸಿದ್ದಾರೆ.
ಬಹಳ ಹೊತ್ತಾದರೂ ಸ್ನೇಹಿತ ಹಿಂದಿರುಗದಾದಾಗ ಕಚೇರಿ ಬಳಿಗೆ ಹೋಗಿರಬಹುದೆಂದು ಪ್ರಶಾಂತ್ ಅಲ್ಲಿಗೆ ಹೋಗಿದ್ದಾನೆ. ಆದರೆ ಅಲ್ಲಿ ಗಾಯಗೊಂಡು ಬಿದ್ದಿದ್ದ ಶಿವಶಂಕರ್ ರೆಡ್ಡಿಯನ್ನು ಕಂಡಿದ್ದಾನೆ. ಶಿವಶಂಕರ್, ತನ್ನನ್ನು ಯಾರೋ ಅಪಹರಿಸಿ ಹಲ್ಲೆ ಮಾಡಿರುವ ವಿಷಯವನ್ನು ಸ್ನೇಹಿತನಿಗೆ ತಿಳಿಸಿದ್ದಾನೆ. ಕೂಡಲೇ ಪ್ರಶಾಂತ್ ಸ್ನೇಹಿತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿಂದ ಮುಂದೆ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಶಿವಶಂಕರ್ ರೆಡ್ಡಿ ಮೃತಪಟ್ಟಿದ್ದಾನೆ.
ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರ, ಗಣೇಶ್, ಕಿರಣ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications