ಶೆಟ್ಟರ್ ಗೆ ಒಂದು ದಿನದ ಗಡುವು ಕೊಟ್ಟ ಪಾಪು

ಸರ್ಕಾರಿ ಜಾಗವನ್ನು ರಿಕ್ರಿಯೇಶನ್ ಕ್ಲಬ್ ಅನ್ನಾಗಿ ಪರಿವರ್ತಿಸಿದ ವಿರುದ್ಧ ಗ್ರೌಂಡ್ ಬಚಾವೋ ಸಮಿತಿ ಆಶ್ರಯದಲ್ಲಿ ಶೆಟ್ಟರ್ ನಿವಾಸದ ಎದುರು ಬುಧವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಇದೇವೇಳೆ ತಮ್ಮ ನಿಲುವು ಪ್ರಕಟಿಸಲು ಶೆಟ್ಟರ್ ಗೆ ಸಮಿತಿ ಅಧ್ಯಕ್ಷ ಪಾಟೀಲ್ ಪುಟ್ಟಪ್ಪ ಗಡುವು ನೀಡಿದ್ದಾರೆ.
ಮೈದಾನ ಸಾರ್ವಜನಿಕರಿಗೆ ಮುಕ್ತವಾಗಬೇಕು ಎಂದು ಆಗ್ರಹಿಸಿ ರಾಜಕೀಯ ಹಿತಾಸಕ್ತಿ ಇಲ್ಲದೆ ಪ್ರತಿಭಟನೆ ಮಾಡುತ್ತಿದ್ದೇವೆ. ಜಗದೀಶ್ ಶೆಟ್ಟರ್ ಅವರ ತೇಜೋವಧೆ ಮಾಡಲು ಅಲ್ಲ ಎಂದು ಸಮತಿ ಸ್ಪಷ್ಟಪಡಿಸಿದೆ.
ರಾಜಕೀಯ ನಾಯಕರು ಜನರಲ್ಲಿ ಒಬ್ಬರಾಗಬೇಕು. ಪ್ರತ್ಯೇಕವಾಗಿ ಬದುಕಬಾರದು. ಕೆಲವರ ಹಿತಾಸಕ್ತಿ ಕಾಪಾಡಲು ಸರ್ಕಾರಿ ಜಾಗದಲ್ಲಿದ್ದ ಮೈದಾನವನ್ನು ಕ್ಲಬ್‌ನ್ನಾಗಿ ಪರಿವರ್ತಿಸಿರುವ ಕುರಿತು ಶೆಟ್ಟರ್ ಗುರುವಾರ ಸಂಜೆಯವೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಪಾಪು ಗಡುವು ವಿಧಿಸಿದ್ದಾರೆ.
ನನ್ನ ಪಾತ್ರವಿಲ್ಲ : ಸಾರ್ವಜನಿಕರಿಗೆ ಮುಕ್ತವಾದ ಮೈದಾನವನ್ನು ರಿಕ್ರಿಯೇಶನ್ ಕ್ಲಬ್ ಆಗಿ ಪರಿವರ್ತಿಸುವಲ್ಲಿ ನನ್ನ ಪಾತ್ರವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಉದ್ದೇಶದಿಂದ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾನು ಸ್ಥಳೀಯ ಜನಪ್ರತಿನಿಧಿಯಾದ ಕಾರಣ ನನ್ನನ್ನು ಕ್ಲಬ್ ಗೌರವ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕಾನೂನು ಮೂಲಕವೇ ಕ್ಲಬ್ ಸ್ಥಾಪಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಕ್ಲಬ್ ಸ್ಥಾಪನೆಯಾಗಿಲ್ಲ ಎಂದು ಶೆಟ್ಟರ್ ತಿಳಿಸಿದರು.
ಪ್ರಸ್ತುತ ನಾವು ಪ್ರತಿ ಪಕ್ಷ ಸ್ಥಾನದಲ್ಲಿ ಕುಳಿತಿದ್ದೇವೆ. ಕ್ಲಬ್ ಅಕ್ರಮವಾಗಿ ಸ್ಥಾಪನೆಗೊಳ್ಳುತ್ತಿದ್ದರೆ ಆ ಕುರಿತು ಸರ್ಕಾರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಿ, ನಾವು ತನಿಖೆ ಎದುರಿಸಲು ಸಿದ್ಧ ಎಂದರು.











Click it and Unblock the Notifications