1 ಕೋ.ರೂ ಚಿನ್ನ ವಶ; ಚಿನ್ನ ಬೆಲೆ 32 ಸಾವಿರಕ್ಕೆ ಏರಿಕೆ

ಡಾಲರ್ ಎದುರು ರೂಪಾಯಿ ಮೌಲ್ಯ 65.50ಕ್ಕೆ ಕುಸಿದಿದೆ. ಇದರಿಂದ ಚಿನ್ನದ ಬೆಲೆ 32,000 ರೂ ಸಮೀಪಕ್ಕೆ ಬಂದುಬಿಟ್ಟಿದೆ. ಈ ಮಧ್ಯೆ, ಮೊನ್ನೆ ಹೊಸೂರು ಬಳಿ ದರೋಡೆಗೊಳಗಾದ 4 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇನ್ನೂ ಪತ್ತೆಯಾಗಿಲ್ಲ.
ಇನ್ನು ಅತ್ತ ಹೈದರಬಾದಿನಲ್ಲಿ (RGIA) ವಿಮಾನ ಪ್ರಯಾಣಿಕನೊಬ್ಬ ಸುಂಕದ ಕಾಟ ತಪ್ಪಿಸಿಕೊಂಡು ಕಳ್ಳಸಾಗಣೆ ಮಾಡಲೆತ್ನಿಸಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳು ಅವನನ್ನು ಬಂಧಿಸಿದ್ದು, ಸುಮಾರು 1 ಕೋಟಿ ರೂ. ಮೌಲ್ಯದ 3 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದ ಜಾಗೃತದಳವು ದುಬೈನಿಂದ ಹೈದರಾಬಾದಿಗೆ ಬೆಳಗ್ಗೆ 7.30ಕ್ಕೆ ಬಂದಿಳಿದ ಮಧ್ಯವಯಸ್ಕ ಪ್ರಯಾಣಿಕನನ್ನು ಮೊನ್ನೆ ತಡೆದು ನಿಲ್ಲಿಸಿದಾಗ ಆತನ ಬಳಿ ಕಳ್ಳಮಾಲು ಸಿಕ್ಕಿದೆ. ತಾನು ತೆರಿಗೆ ತೆರುವಂತಹ ವಸ್ತುಗಳು ಯಾವುವೂ ಇಲ್ಲ ಎಂದು ಘೋಷಿಸಿಕೊಂಡ ಸದರಿ ವ್ಯಕ್ತಿ ಗ್ರೀನ್ ಚಾನೆಲ್ ನಲ್ಲಿ ನುಸುಳಲು ಯತ್ನಿಸಿದ.
ಆದರೆ ಸದರಿ ವ್ಯಕ್ತಿ ಪದೇ ಪದೇ ವಿದೇಶಗಳಿಗೆ ಭೇಟಿ ನೀಡಿರುವುದರ ಬಗ್ಗೆ ತಿಳಿದುಕೊಂದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕಳ್ಳಸಾಗಣೆ ಬಯಲಾಗಿದೆ.
ಆರೋಪಿಯನ್ನು ದೈಹಿಕವಾಗಿ ತಡಕಾಡಿದಾಗ ಆತನ ಒಳ ಉಡುಪಿನಲ್ಲಿ ಮೂರು ಪ್ಯಾಕೆಟ್ಟುಗಳಲ್ಲಿ ಚಿನ್ನಾಭರಣವಿರುವುದು ಪತ್ತೆಯಾಗಿದೆ. ಆರೋಪಿಯನ್ನು ಅಧಿಕಾರಿಗಳು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.












Click it and Unblock the Notifications