ಶಿವು, ಜಡೇಸ್ವಾಮಿ ಗಲ್ಲು ಶಿಕ್ಷೆಗೆ ಸುಪ್ರೀಂ ತಡೆ

ಬುಧವಾರ ಗಲ್ಲು ಶಿಕ್ಷೆ ತಡೆ ನೀಡುವಂತೆ ಕೋರಿ ಶಿವು ಮುನಿಶೆಟ್ಟಿ ಮತ್ತು ಜಡೇಸ್ವಾಮಿ ರಂಗಾಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಮತ್ತು ನ್ಯಾ.ರಂಜನ್ ಗೊಗೋಯ್ ಅವರಿದ್ದ ದ್ವಿಸದಸ್ಯ ಪೀಠ, ಗಲ್ಲು ಶಿಕ್ಷೆಗೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿತು.
ತಮ್ಮ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಶಿವು ಮತ್ತು ಜಡೇಸ್ವಾಮಿ ಮನವಿ ಮಾಡಿದ್ದರು. ಅಪರಾಧಿಗಳ ಪರವಾಗಿ ವಕೀಲ ವಿಶ್ವನಾಥ್ ವಾದ ಮಂಡಿಸಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ, ನ್ಯಾಯಾಲಯ ಗಲ್ಲು ಶಿಕ್ಷೆಗೆ 4 ವಾರಗಳ ತಡೆಯಾಜ್ಞೆ ನೀಡಿದೆ.
ಹಿಂದಿನ ಸುದ್ದಿ : ರಾಷ್ಟ್ರಪತಿ ಅವರಿಂದ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಖೈದಿ ಶಿವು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈ ಮತ್ತು ಮರ್ಮಾಂಗಕ್ಕೆ ಗಾಯಮಾಡಿಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಬೆಳಗ್ಗೆ ಶಿವು ಬ್ಲೇಡ್ ನಿಂದ ಕೈ ಮತ್ತು ಮರ್ಮಾಂಗಕ್ಕೆ ಗಾಯಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಜೈಲಿನ ಅಧಿಕಾರಿಗಳು ತಕ್ಷಣ ಅವರನ್ನು ಬೆಳಗಾವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುರುವಾರ ಶಿವು ಮತ್ತು ಜಡೇಸ್ವಾಮಿಗೆ ಗಲ್ಲು ಶಿಕ್ಷೆ ವಿಧಿಸಲು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. (ಶಿವು, ಜಡೇಸ್ವಾಮಿ ಅಪರಾಧವೇನು)
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ಶಿವು 2001ರ ಅಕ್ಟೋಬರ್ 15ರಂದು 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾಗಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಆ.22ರ ಗುರುವಾರ ಮುಂಜಾನೆ 6 ಗಂಟೆಗೆ ಶಿವು ಮತ್ತು ಅತ್ಯಾಚಾರ ಪ್ರಕರಣದ ಮತ್ತೊಬ್ಬ ಅಪರಾಧಿ ಜಡೇಸ್ವಾಮಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ ಎಂದು ಹಿಂಡಲಗಾ ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ಇಬ್ಬರು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯ ವಿಚಾರರಣೆ ಬುಧವಾರ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. (ಮರಣದಂಡನೆ : ಗಲ್ಲಿಗೇರಿಕೆ ಎಂಬ ಡೆಡ್ಲಿ ಪ್ರೊಸಿಜರ್)
ಬುಧವಾರ ಬೆಳಗ್ಗೆ ಶಿವು ಕೈ ಮತ್ತು ಮರ್ಮಾಂಗಕ್ಕೆ ಗಾಯಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಗಳವಾರ ರಕ್ಷಾಬಂಧನದ ದಿನ ಶಿವು ಅವರ ತಂಗಿ ಹಿಂಡಲಗಾ ಜೈಲಿಗೆ ಭೇಟಿ ನೀಡಿ ಅಣ್ಣನಿಗೆ ರಾಖಿ ಕಟ್ಟಿ ಧೈರ್ಯತುಂಬಿದ್ದರು. ಶಿವು ಆಸ್ಪತ್ರೆಗೆ ದಾಖಲಾಗಿರುವುದರಿಂದ ಗಲ್ಲು ಶಿಕ್ಷೆ ಬಗ್ಗೆ ಜೈಲಿನ ಅಧಿಕಾರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕು. (ಶಿವು ಮತ್ತು ಜಡೇಸ್ವಾಮಿಗೆ ಆ.22ರಂದು ಗಲ್ಲು)












Click it and Unblock the Notifications