ಸ್ಫೋಟದಿಂದ ಎಡಗೈ ಮೊಂಡುಗೈ ಆದಾಗ ತುಂಡಾ ಹುಟ್ಟಿದ
ನವದೆಹಲಿ, ಆಗಸ್ಟ್ 20: ಮೊನ್ನೆ ಸಿಕ್ಕಿಬಿದ್ದ ಮೋಸ್ಟ್ ವಾಂಟೆಡ್ ಉಗ್ರ, ಅಲ್ ಖೈದಾ ಸಂಘಟನೆ ಭಯೋತ್ಪಾದಕ, ಐಎಸ್ಐ ಜತೆ ಹಾಟ್ ಲಿಂಕ್ ಹೊಂದಿರುವ ಅಬ್ದುಲ್ ಕರೀಂ ಅಲಿಯಾಸ್ ತುಂಡಾ ದೆಹಲಿ ಪೊಲೀಸರ ಎದುರು ಏನೇನೋ ಬಡಬಡಿಸುತ್ತಿದ್ದಾನೆ. ಅಬ್ದುಲ್ ಕರೀಂ ಮುಂದೆ ತುಂಡಾ ಎಂಬ ತುಂಡು ಹೆಸರು ಅಂಟಿಕೊಂಡಿದ್ದು ಹೇಗೆ ಎಂಬುದನ್ನು ದೆಹಲಿ ಪೊಲೀಸರೆದುರು ಹೇಳಿಕೊಂಡಿದ್ದಾನೆ.
ಲಾಡೆನ್ ನಂತೆ ಸ್ತ್ರೀವ್ಯಸನಿ:
ಇನ್ನು ಇವನ ಖಾಸಗಿ ಬದುಕಿನಲ್ಲಿ ಇಣುಕು ನೋಟ ಬೀರಿದಾಗ ನಿಜಕ್ಕೂ ಇವನು ತುಂಬು ಕುಟುಂಬಸ್ಥನೇ. ಮೂವರು ಹೆಂಡಿರ ಸರದಾರ. ಫಲಿತವಾಗಿ 7 ಮಕ್ಕಳಿಗೆ ತಂದೆ ಎನಿಸಿಕೊಂಡಿದ್ದಾನೆ. ಎಲ್ರೂ ಪಾಕಿಸ್ತಾನದ ಲಾಹೋರಿನಲ್ಲಿ ಬೀಡುಬಿಟ್ಟಿದ್ದಾರೆ.

ಜರೀನಾ, ಮುಮ್ತಾಜ್ ಮತ್ತು ಆಸ್ಮಾ ಇವನ ಹೆಂಡಿರು. 48 ವರ್ಷದ ಹಿರಿಯ ಮಗನೇ ಇವನಿಗಿದ್ದಾನೆ. ಇಂತಿಪ್ಪ ಪಾಪಿಗೆ ನಾಲ್ಕು ವರ್ಷಗಳ ಮಗನೂ ಇದ್ದಾನೆ. ಮೊದಲನೆಯವನು ಅನೇಕ ವರ್ಷಗಳ ಹಿಂದೆ ಮನೆ ಬಿಟ್ಟು ಹೋದವನು ಇನ್ನೂ ವಾಪಸಾಗಿಲ್ಲ.
ದೆಹಲಿ ಪೊಲೀಸರ ಪ್ರಕಾರ ತುಂಡಾನ ಎರಡನೇ ಪತ್ನಿ ಮುಮ್ತಾಜಳ ಮೂರನೆ ಮಗನ ಹೆಸರು ಅಬ್ದುಲ್ ವಾರೀಸ್. ಇವನೂ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಸಕ್ರಿಯನಾಗಿರುವವನೇ. ಲಷ್ಕರೆ ತಯ್ಯಬಾದ ಉಗ್ರ. ಕಾಶ್ಮೀರ ಪೊಲೀಸರು ಒಮ್ಮೆ ಇವನನ್ನು ಬಂಧಿಸಿಯೂ ಇದ್ದರು. 8 ವರ್ಷ ಜೈಲಿನಲ್ಲಿಟ್ಟಿದ್ದರು. ಬಿಡುಗಡೆಯ ನಂತರ ಪಾಕಿಸ್ತಾನಕ್ಕೆ ಹೋಗಿ ಸೇರಿಕೊಂಡಿದ್ದಾನೆ.
ಲಾಹೋರ್ ಮತ್ತು ಕರಾಚಿಯಲ್ಲಿರುವ ಪುತ್ರರು ಮತ್ತು ಪತ್ನಿಯರು ತುಂಡಾನ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದಾರೆ. ತುಂಡಾ ತನ್ನ ಹುಟ್ಟೂರಾದ ಉತ್ತರಪ್ರದೇಶದ ಗಾಜಿಯಾಬಾದಿನಲ್ಲಿ 1964ರಲ್ಲಿ ಮೊದಲು ಜರೀನಾಳನ್ನು ಮದುವೆಯಾದ. ಬಳಿಕ, 1984ರಲ್ಲಿ ಜೀವನೋಪಾಯಕ್ಕಾಗಿ ಅಹಮದಾಬಾದಿಗೆ ಹೋದಾಗ ಮುಮ್ತಾಜ್ ಜತೆ ನಿಖಾ ಆದ. 1995ರಲ್ಲಿ ಬಾಂಗ್ಲಾದೇಶದಲ್ಲಿ 18 ವರ್ಷದ ಆಸ್ಮಾಳನ್ನೂ ಮದುವೆಯಾದ.
ಅಂದಹಾಗೆ ತುಂಡಾ ಹುಟ್ಟಾ ಉಗ್ರನಲ್ಲ. ತಾನು 40ನೇ ವಯಸ್ಸಿನಲ್ಲಿದ್ದಾಗ ತನ್ನ ಸಂಬಂಧಿಕರನ್ನು ಪೊಲೀಸರು ಹೊಡೆದುರುಳಿಸಿದರು ಎಂದು ಜಿಹಾದಿಗೆ ಮರುಳಾದ ಭೂಪ.
ಕೈ ತುಂಡಾದಾಗ ತುಂಡಾ ಎಂಬ ತುಂಡು ಹೆಸರು ಅಂಟಿಕೊಂಡಿತು:
1985ರಲ್ಲಿ ರಾಜಸ್ಥಾನದ ಟೋಂಕ್ ನಗರದಲ್ಲಿ ಮಸೀದಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿ ಪೈಪ್ ಬಾಂಬ್ ತಯಾರಿಸುವಾಗ ಎಡಗೈ ಮೊಂಡುಗೈ ಆಯ್ತು. ಆಗಲೇ ಅವನಿಗೆ ತುಂಡು ಅಥವಾ ತುಂಡಾ ಎಂಬ ಹೆಸರು ಅಂಟಿಕೊಂಡಿದ್ದು.
1994ರಲ್ಲಿ ದಕ್ಷಿಣ ದಿಲ್ಲಿಯ ಮಾಳವಿಯಾ ನಗರದಲ್ಲಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಆ ಪ್ರಕರಣದಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈಗ ತುಂಡಾ 7 ನೆಯವನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಡಾನನ್ನು ಇಂದು ಮಂಗಳವಾರ ಕೋರ್ಟಿನಲ್ಲಿ ಹಾಜರುಪಡಿಸಲಿದ್ದಾರೆ.












Click it and Unblock the Notifications