ಜಿಎಸ್‌ಎಲ್‌ವಿ-ಡಿ5 ಉಪಗ್ರಹ ಉಡಾವಣೆ ಸ್ಥಗಿತ
ಹೈದರಾಬಾದ್, ಆ.19 : ತಾಂತ್ರಿಕ ದೋಷದ ಕಾರಣದಿಂದಾಗಿ ಜಿಎಸ್‌ಎಲ್‌ವಿ-ಡಿ5 ಉಪಗ್ರಹ ಉಡಾವಣೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ. ರಾಕೆಟ್ ನಲ್ಲಿ ಇಂಧನ ಸೋರಿಕೆ ಕಂಡುಬಂದ ಹಿನ್ನಲೆಯಲ್ಲಿ ಉಡಾವಣೆ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೋ ಹೇಳಿದೆ.
ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಲಾಗಿರುವ ಜಿಎಸ್‌ಎಲ್‌ವಿ-5ಡಿ ಉಪಗ್ರಹವನ್ನು ಸೋಮವಾರ ಸಂಜೆ 4.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಬೇಕಾಗಿತ್ತು. ಭಾನುವಾರದಿಂದ ಉಪಗ್ರಹ ಉಡಾವಣೆಯ ಕೌಂಟ್ ಟೌನ್ ಕ್ಲಾಕ್ ಚಾಲನೆ ಪಡೆದಿತ್ತು.

ಆದರೆ, ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾದಾಗ, ಇಂಧನ ಸೋರಿಕೆ ಕಂಡು ಬಂದ ಹಿನ್ನಲೆಯಲ್ಲಿ ಉಡಾವಣೆ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ರಾಧಾ ಕೃಷ್ಣನ್ ಹೇಳಿದ್ದಾರೆ.
ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 1,982 ಕೆ.ಜಿ ತೂಕದ ಉಪಗ್ರಹ ಹೊತ್ತಿರುವ 49.13 ಮೀಟರ್ ಉದ್ದದ ರಾಕೆಟ್ ಬಾನಂಗಳಕ್ಕೆ ಹಾರಬೇಕಾಗಿತ್ತು.
ಉಪಗ್ರಹ ಉಡಾವಣೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ರಾಧಾ ಕೃಷ್ಣನ್ ಹೇಳಿದ್ದಾರೆ. ಮೂರು ವರ್ಷಗಳ ಹಿಂದೆ ಕ್ರಯೋಜೆನಿಕ್ ಎಂಜಿನ್ ಹೊಂದಿದ್ದ ರಾಕೆಟ್ ಉಡಾವಣೆ ವೇಳೆ ವಿಫಲಗೊಂಡಿತ್ತು.












Click it and Unblock the Notifications