ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ 'ವಜ್ರ' ಹುಡುಕಿ ಹೊರಟ ಗೌಡ್ರು

By * ರಾಜೇಶ್ ಕೊಂಡಾಪುರ
|
Google Oneindia Kannada News

ರಾಮನಗರ, ಆ.9: ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಕಣಕ್ಕಿಳಿಯುತ್ತಿದ್ದಂತೆ ಚನ್ನಪಟ್ಟಣ ತಾಲೂಕಿನ ಜೆಡಿಎಸ್ ಮತ್ತು ಸಮಾಜವಾದಿ ಪಕ್ಷದ ಕೆಲ ಮುಖಂಡರು ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ. ಇತ್ತ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ ನಿಂದ ಕಳೆದು ಹೋದ 'ವಜ್ರ' ಹುಡುಕಾಟದಲ್ಲಿದ್ದಾರೆ.

ಇದರ ಬೆನ್ನಲ್ಲೆ ಕ್ಷೇತ್ರವ್ಯಾಪ್ತಿಯಲ್ಲಿ ಹೆಚ್ಚು ಉತ್ಸುಕರಾಗಿ ಓಡಾಡುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಹೆಚ್ಚಿನ 'ಶ್ರಮವ್ಯಯ' ಮಾಡುತ್ತಿದ್ದಾರೆ. ಅದರಂತೆ ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಮನೆಗೆ ಶುಕ್ರವಾರ ಭೇಟಿ ನೀಡಿ, ತಮ್ಮ ಸೊಸೆ ಅನಿತಾ ಕುಮಾರಸ್ವಾಮಿ ಗೆಲುವಿಗೆ ಸಹಕಾರ ನೀಡುವಂತೆ ಕೋರಿದ್ದಾರೆ.

ಇಲ್ಲಿನ ಅಶ್ವತ್ಥ್ ನಿವಾಸಕ್ಕೆ ಭೇಟಿ ನೀಡಿದ ಗೌಡರು, ಅಶ್ವತ್ಥ್ ಮತ್ತು ಅವರ ಕುಟುಂಬದೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಈ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವೊಲಿಸಿದ್ದಾರೆ.

ಯೋಗೀಶ್ವರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಸಂದರ್ಭದಲ್ಲಿ ನಡೆದ ವಿಧಾನಸಭಾ ಮರು ಚುನಾವಣೆಯಲ್ಲಿ ಅಶ್ವತ್ಥ್ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಅಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಕುಮಾರಸ್ವಾಮಿ ನಮ್ಮ ಪಕ್ಷದ ಎಲ್ಲಾ ಶಾಸಕರು 24 ಕ್ಯಾರೇಟ್ ಗೋಲ್ಡ್. ನಮ್ಮ ಶಾಸಕರ್ಯಾರು ಪಕ್ಷ ಬಿಡುವುದಿಲ್ಲವೆಂದು ಘೋಷಿಸಿದ್ದರು. ಆದರೆ, ಅಶ್ವತ್ಥ್ ತಮ್ಮ ಮನೆಯಲ್ಲಿ ನಡೆದ ಪಿತೃಪಕ್ಷದ ದಿನ ಜೆಡಿಎಸ್ ಬಿಟ್ಟು ಬಿಜೆಪಿಯ ರೆಡ್ಡಿ ಸಹೋದರರ ತೆಕ್ಕೆ ಬಿದ್ದಿದ್ದರು.

HD Deve gowda seeks former MLA MC Ashwath's help

ಈ ಸಂದರ್ಭದಲ್ಲಿ ಪಿತೃ ಪಕ್ಷದ ದಿನ ಮಾತೃ ಪಕ್ಷ ಮರೆತ ಅಶ್ವತ್ಥ್' ಎಂದು ಕೆಂಡಾಮಂಡಲರಾದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ 'ಅಶ್ವತ್ಥ್ ನಕಲಿ ವಜ್ರ' ಎಂದು ಕುಮಾರಸ್ವಾಮಿ ಜರೆದಿದ್ದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೂ ನನ್ನ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು, ಈ ಬಾರಿ ಉಪಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ಜಯಗಳಿಸುವುದು ಖಚಿತ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ತಾಲ್ಲೂಕಿನ ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಸುದ್ದಿಗಾರರ ಜೊತೆ ಮಾತನಾಡಿದರು.

ಕನಕಪುರ ಲೋಕಸಭಾ ಕ್ಷೇತ್ರವಿದ್ದಾಗ ನನ್ನನ್ನು ಮತ್ತು ನನ್ನ ಮಗ ಕುಮಾರಸ್ವಾಮಿಯನ್ನು ಆರಿಸಿ ಕಳುಹಿಸಿದ ಕ್ಷೇತ್ರ ಇದು. ಈಗ ಸೊಸೆ ಅನಿತಾಕುಮಾರಸ್ವಾಮಿಯನ್ನು ಆರಿಸಿ ಕಳುಹಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು. ಈ ಕ್ಷೇತ್ರದಲ್ಲಿ ನನ್ನ ಪಕ್ಷದ ಮತದಾರರು ಎಂದೂ ಕೂಡ ನನ್ನನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಪ್ರಸ್ತುತ ಹದಗೆಟ್ಟಿರುವ ರಾಜಕಾರಣ ನನ್ನನ್ನು ವಿಚಲಿತಗೊಳಿಸಿದೆ. ಈ ಎಲ್ಲಾ ಬೆಳವಣಿಗೆಗಳಿಗೂ ನಮ್ಮ ಕಾರ್ಯಕರ್ತರೇ ಉತ್ತರ ನೀಡಬೇಕು ಎಂದು ದೇವೇಗೌಡ ಹೇಳಿದರು.

ಮಾಜಿ ಶಾಸಕ ಅಶ್ವಥ್ ಹಲವು ವರ್ಷಗಳಿಂದ ನಮ್ಮ ಪಕ್ಷ ಬಿಟ್ಟು ರಾಜಕಾರಣದಿಂದ ದೂರ ಉಳಿಸಿದ್ದರು. ಈಗ ಮತ್ತೇ ನಮ್ಮ ಜೊತೆ ಕೈಜೋಡಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಪಕ್ಷದ ಅಭ್ಯರ್ಥಿಯ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದರು.

ಕಳೆದ ಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ಸೋತಿದ್ದರೂ ಸಹ 73 ಸಾವಿರಕ್ಕೂ ಹೆಚ್ಚು ಮತಗಳು ಈ ಕ್ಷೇತ್ರದಲ್ಲಿ ಬಂದಿವೆ. ಕಾರ್ಯಕರ್ತರಾರೂ ಕೂಡ ನಮ್ಮನ್ನು ಕೈ ಬಿಟ್ಟಿಲ್ಲ ಎಂಬುದಕ್ಕೆ ಈ ಮತಗಳೇ ಸಾಕ್ಷಿ ಎಂದು ದೇವೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಶಾಸಕ ಎಂ.ಸಿ.ಅಶ್ವಥ್ ಮಾತನಾಡಿ, ನಾನು ಪಕ್ಷ ಬಿಟ್ಟ ನಂತರ ಜೆಡಿಎಸ್ ವಿರುದ್ಧ ಯಾವುದೇ ಪಕ್ಷ ಚಟುವಟಿಕೆ ಮಾಡಿಲ್ಲ. ನಾನು ನನ್ನ ಹಲವು ಜೆಡಿಎಸ್ ಸ್ನೇಹಿತರಿಗೆ ಚುನಾವಣೆ ಸಂದರ್ಭಗಳಲ್ಲಿ ಸಹಾಯ ಮಾಡಿದ್ದೇನೆ ಎಂದರು. ನಾನು ಜೆಡಿಎಸ್ ತೊರೆದ ನಂತರ ತಾಲ್ಲೂಕು ರಾಜಕಾರಣದಲ್ಲಿ ಸಕ್ರೀಯವಾಗಿ ಇರದೆ ರಾಜಧಾನಿ ಸೇರಿದ್ದೆ. ಈಗ ದೊಡ್ಡಗೌಡರ ಅಣತಿಯಂತೆ ಮತ್ತೇ ಮಾತೃ ಪಕ್ಷಕ್ಕೆ ಮರಳಿದ್ದೇನೆ. ಈ ಬಾರಿಯ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಪರ ದುಡಿಯುತ್ತೇನೆ ಎಂದರು.

ಬೇಸರ ವ್ಯಕ್ತಪಡಿಸಿದ ಮುಖಂಡರು : ನಾವು ಕಳೆದ ಹಲವು ವರ್ಷಗಳಿಂದ ನಾವು ಜೆಡಿಎಸ್‍ಗೆ ಪ್ರಮಾಣಿಕವಾಗಿ ದುಡಿಯುತ್ತಿದ್ದೇವೆ. ಸ್ಥಳೀಯವಾಗಿಯೂ ನಮಗೆ ಕೆಲ ಮುಖಂಡರು ನಗರಸಭೆ ಚುನಾವಣೆಯಲ್ಲಿ ಗುಂಪುಗಾರಿಕೆ ಮಾಡಿಕೊಂಡು ತೊಂದರೆ ನೀಡಿದರೂ, ಈಗ ಅನಿತಾಕುಮಾರಸ್ವಾಮಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪರವಾಗಿ ಕೆಲಸ ಮಾಡಿಲ್ಲ ಎನ್ನುವಂತೆ ಮಾತನಾಡುತ್ತಾರೆ.

ನಾವು ನಮ್ಮ ಮನೆ ದುಡ್ಡು ಖರ್ಚು ಮಾಡಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಇದನ್ನು ಏಕೆ ಕುಮಾರಸ್ವಾಮಿ ಅವರು ಕೂಡ ಗಮನಿಸುತ್ತಿಲ್ಲವೆಂದು ನಗರಸಭೆ ಸದಸ್ಯ ಜಬೀವುಲ್ಲಾಖಾನ್ ಘೋರಿ ಹಾಗೂ ಅವರ ಸಹೋದರ ಜಿಯಾವುಲ್ಲಾ ಖಾನ್ ಘೋರಿ ಗೌಡರ ಬಳಿ ಅಳಲು ತೋಡಿಕೊಂಡರು. ಈ ಬಗ್ಗೆ ತಾವು ಗಮನ ನೀಡುವುದಾಗಿ ದೇವೇಗೌಡರು ವಾಗ್ಧಾನವಿತ್ತರು.

English summary
HD Deve gowda seeks former MLA MC Ashwath's help in upcoming Lok Sabha by election. Former JDS rebel leader MC Ashwath is likely support JDS candidate Anitha Kumaraswamy reports Rajesh Kondapura
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X