1500 ಕೋಟಿಗೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಮಾರಾಟ
ವಾಷಿಂಗ್ಟನ್, ಆ.7 : ಅಮೆರಿಕದ ಪ್ರತಿಷ್ಠಿತ ಪ್ರತಿಕೆಗಳಲ್ಲಿ ಒಂದಾದ ವಾಷಿಂಗ್ಟನ್ ಪೋಸ್ಟ್ ಮಾರಾಟವಾಗುತ್ತಿದೆ. ಅಮೆಜಾನ್ ಡಾಟ್‌ಕಾಮ್‌ನ ಮಾಲೀಕ ಜೆಫ್ ಬೆಜೋಸ್ ಪತ್ರಿಕೆಯನ್ನು 1500 ಕೋಟಿ ರೂ.ಗಳಿಗೆ ಖರೀದಿಸಲಿದ್ದಾರೆ.
ಪತ್ರಿಕೆಯ ಮಾರಾಟ ಪ್ರಕ್ರಿಯೆ ಪ್ರಾರಂಭವಾಗಿದ್ದು, ಎರಡು ತಿಂಗಳನಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಗಿದು, ಪತ್ರಿಕೆ ಜೆಫ್ ಬೆಜೋಸ್ ಪಾಲಾಗಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

1877ರಲ್ಲಿ ಆರಂಭವಾದ ಪತ್ರಿಕೆಯನ್ನು ಸುಮಾರು 1500 ಕೋಟಿ ರೂ.ಗಳಿಗೆ ಜೆಫ್ ಖರೀದಿಸಲಿದ್ದಾರೆ. ಇದರೊಂದಿಗೆ 135 ವರ್ಷಗಳಷ್ಟು ಹಳೆಯದಾದ, ಪತ್ರಿಕೆ ಗ್ರಹಾಂ ಕುಟುಂಬದಿಂದ ಜೆಫ್ ಅವರ ಕೈಗೆ ಹಸ್ತಾಂತರವಾಗಲಿದೆ.
ಅಮೆರಿಕಾದ ಅಧ್ಯಕ್ಷ ನಿಕ್ಸನ್ ತಲೆದಂಡಕ್ಕೆ ಕಾರಣವಾದ ವಾಟರ್ ಗೇಟ್ ನಂತಹ ಹಗರಣಗಳನ್ನು ಬಯಲಿಗೆಳೆದ ಇತಿಹಾಸವನ್ನು ಪತ್ರಿಕೆ ಹೊಂದಿದೆ. ಜೆಫ್ ಏಕಾಂಗಿಯಾಗಿ ಪತ್ರಿಕೆಯನ್ನು ಖರೀದಿ ಮಾಡಲಿದ್ದಾರೆ.
ಅಮೆಜಾನ್ ಡಾಟ್‌ಕಾಮ್‌ಗೂ ಇದಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಅಮೆರಿಕದ ಅತ್ಯಂತ ಪ್ರಭಾವಿ ಪತ್ರಿಕೆಗಳಲ್ಲಿ ಒಂದಾಗಿದ್ದ ವಾಷಿಂಗ್ಟನ್ ಪೋಸ್ಟ್ ಮುಂದಿನ ದಿನಗಳಲ್ಲಿಯೂ ತನ್ನ ಘನತೆಯನ್ನು ಉಳಿಸಿಕೊಂಡು ಹೋಗಲಿದೆ ಎಂದು ಜೆಫ್ ಹೇಳಿದ್ದಾರೆ.
ಏಕೆ ಮಾರಾಟ : ಕೆಲವು ದಿನಗಳಿಂದ ಜಾಹೀರಾತು ಆದಾಯ ಕುಸಿದ ಪರಿಣಾಮ ವಾಷಿಂಗ್ಟನ್ ಪೋಸ್ಟ್‌ನ ಆದಾಯದಲ್ಲಿ ಭಾರೀ ಇಳಿಕೆಯಾಗಿತ್ತು. ವಾಷಿಂಗ್ಟನ್ ಪೋಸ್ಟ್‌ನ ಪತ್ರಿಕಾ ವಿಭಾಗವೂ ಜೂನ್‌ಗೆ ಕೊನೆಗೊಂಡ 6 ತಿಂಗಳ ಅವಧಿಯಲ್ಲಿ 258 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದ್ದರಿಂದ ಪತ್ರಿಕೆಯನ್ನು ಮಾರಾಟ ಮಾಡಲಾಗುತ್ತಿದೆ.
ಪ್ರಭಾವಿ ಪತ್ರಿಕೆ : ವಾಷಿಂಗ್ಟನ್ ಪೋಸ್ಟ್ ಅಮೆರಿಕದ ಅತ್ಯಂತ ಪ್ರಭಾವಿ ಪತ್ರಿಕೆಗಳಲ್ಲಿ ಒಂದು. ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸಾಧನೆಗಾಗಿ ನೀಡುವ ಪುಲಿಟ್ಜರ್ ಪ್ರಶಸ್ತಿಗಳನ್ನು 47 ಪತ್ರಿಕೆ ಪಡೆದಿದೆ. ಪತ್ರಿಕೆಯು ಛಾಯಾಸುದ್ದಿ ವಿಭಾಗದಲ್ಲಿ 368 ಪ್ರಶಸ್ತಿ ಪಡೆದುಕೊಂಡಿದೆ.
ಜೆಫ್ ಬೆಜೋಸ್ ಕುರಿತು : ಪೋರ್ಬ್ಸ್ ಪತ್ರಿಕೆಯ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 19ನೇ ಸ್ಥಾನ ಪಡೆದುಕೊಂಡಿರುವ ಜೆಫ್ ಬೆಜೋಸ್, 1.50 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಟ್ವೀಟರ್ ಸೇರಿದಂತೆ ಹಲವು ಆನ್‌ಲೈನ್ ತಾಣಗಳಲ್ಲಿ ಇವರು ಹೂಡಿಕೆ ಮಾಡಿದ್ದದ್ದಾರೆ. ಬಾಹ್ಯಾಕಾಶಕ್ಕೆ ಜನರನ್ನು ಕರೆದೊಯ್ಯುವ ಖಾಸಗಿ ಯೋಜನೆಯಲ್ಲೂ ಇವರು ಪಾಲುದಾರರು.












Click it and Unblock the Notifications