ಈರುಳ್ಳಿ ಕೊಳ್ಳುವಾಗಲೂ ಬೆಂಗಳೂರಿಗರ ಕಣ್ಣೀರು!

ಆದರೆ ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಈರುಳ್ಳಿಗೆ ಬೇಡಿಕೆ ಕುಸಿಯುತ್ತದೆ. ಹಾಗಾಗಿ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ.
ಮಂಗಳವಾರ ಬೆಂಗಳೂರಿನ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 49 ರೂ. ಆಗಿದೆ. ಹಾಪ್ ಕಾಮ್ಸ್ ನಲ್ಲಿ 46 ರೂ.ಗಳಿಗೆ ದೊರೆಯುತ್ತಿದೆ. ಬುಧವಾರದಿಂದ ಈರುಳ್ಳಿ ಬೆಲೆ 50 ರೂ. ಗಡಿದಾಟಲಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟಕ್ಕೆ ಸಿಲುಕಿ ಈರುಳ್ಳಿ ಬೆಲೆ ನಾಶವಾಗಿದೆ. ಆದ್ದರಿಂದ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಬೆಲೆ 50ರ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಮಂಗಳವಾರ ದೊಡ್ಡ ಈರುಳ್ಳಿ ಧಾರಣೆ ಪ್ರತಿ ಕ್ವಿಂಟಾಲ್ ಗೆ ರೂ.3000 ದಿಂದ 3500 ರೂ. ಮತ್ತು ಸಣ್ಣ ಈರುಳ್ಳಿ 2,500 ರೂ. ನಿಂದ 2,700 ರೂ.ಗಳಿಗೆ ಮಾರಾಟವಾಗುತ್ತಿದೆ. ಸೋಮವಾರಕ್ಕೆ ಹೋಲಿಸಿದರೆ ಈರುಳ್ಳಿ ಧಾರಣೆ 500ರಿಂದ 1000 ರೂ. ಹೆಚ್ಚಾಗಿದೆ.
ದೇಶದಲ್ಲೇ ಬೆಲೆ ಹೆಚ್ಚಳ : ನಾಸಿಕ್ ಮತ್ತು ರಾಜಸ್ತಾನದಿಂದ ದೆಹಲಿ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆ ಆಗಿದೆ. ದೇಶದ ಎಲ್ಲಾ ನಗರಗಳಲ್ಲೂ ಈರುಳ್ಳಿ ಬೆಲೆ ಹೆಚ್ಚಾಗಿದೆ. ಕಳೆದ ಒಂದು ತಿಂಗಳಿನಲ್ಲಿ ಈರುಳ್ಳಿ ಧಾರಣೆ ಶೇ 50ರಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ-ಅಭಿವೃದ್ಧಿ ಪ್ರತಿಷ್ಠಾನ ಹೇಳಿದೆ.
ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಹೊಸ ಈರುಳ್ಳಿ ಮಾರುಕಟ್ಟೆ ಪ್ರವೇಶಿಸಲಿದ್ದು ನಂತರ ಬೆಲೆ ಇಳಿಮುಖವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಈರುಳ್ಳಿ ದೋಸೆಗೆ ಆರ್ಡರ್ ಮಾಡಲು ಸಕಾಲವಲ್ಲ!)
ಈರುಳ್ಳಿ ಬೆಲೆ ಹೆಚ್ಚಾಗಿದ್ದರಿಂದ ಹೋಟೆಲ್ ಗಳಲ್ಲಿ ದೋಸೆಗಳ ಬೆಲೆಗಳು 5.ರೂ ಏರಿಕೆಯಾಗಿದೆ. ಈರುಳ್ಳಿ ಕತ್ತರಿಸುವಾಗ ಕಣ್ಣೀರು ಹಾಕುತ್ತಿದ್ದ ಜನರು, ಕೊಳ್ಳುವಾಗಲೂ ಕಣ್ಣೀರು ಹಾಕುವ ದಿನಗಳು ದೂರವಿಲ್ಲ.












Click it and Unblock the Notifications