ಉನ್ನತ ಸ್ಥಾನಮಾನ : ಪರಮೇಶ್ವರ್ ಪರ ಮಠಾಧೀಶರು

ಜಿ.ಪರಮೇಶ್ವರ್ ಅವರ 62ನೇ ಹುಟ್ಟುಹಬ್ಬದ ಅಂಗವಾಗಿ ಅವರ ತುಮಕೂರು ನಿವಾಸಕ್ಕೆ ಸೋಮವಾರ ಆಗಮಿಸಿದ್ದ 25ಕ್ಕೂ ಹೆಚ್ಚು ಮಠಾಧೀಶರು ಪರಮೇಶ್ವರ್ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯೊಳಗೆ ಪರಮೇಶ್ವರ್ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಇಲ್ಲವಾದಲ್ಲಿ ಚುಣಾವಣೆಯ ಫಲಿತಾಂಶ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ.
ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ವಿಶ್ವಾಸ ಜಿಲ್ಲೆಯ ಜನರಿಗಿತ್ತು. ಆದರೆ, ಅವರಿಗೆ ಸಿಎಂ ಸ್ಥಾನ ತಪ್ಪಿದ್ದು, ಜಿಲ್ಲೆಗಾದ ನಷ್ಟ ಎಂದು ಮಠಾಧೀಶರು ವಿಶ್ಲೇಷಿಸಿದರು. ಕ್ಷೇತ್ರದಲ್ಲಿ ಸೋಲುಂಡರು ಅವರು, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ ಎಂದರು.
ಲೋಕಸಭೆ ಚುನಾವಣೆಯೊಳಗೆ ಪರಮೇಶ್ವರ್ ಅವರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ, ಮಠಾಧೀಶರು ದೆಹಲಿಗೆ ಹೋಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಪಕ್ಷದ ತೀರ್ಮಾನ : ಮಠಾಧೀಶರ ಮಾತಿಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ರಾಜ್ಯದ ಚುಕ್ಕಾಣಿಯನ್ನು ನಾನು ಹಿಡಯಬೇಕೆಂದು ಅವರು ಬಯಸುತ್ತಿದ್ದಾರೆ. ಆದರೆ, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.
ಸದ್ಯ ಪಕ್ಷ ಚುನಾವಣೆಯಲ್ಲಿ ಪ್ರಣಾಳಿಕೆ ಮೂಲಕ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವುದು ನಮ್ಮ ಮುಂದಿರುವ ಗುರಿ. ಅದನ್ನು ಪೂರೈಸಲು ಕೆಲಸ ಮಾಡುತ್ತೇನೆ. ಸ್ಥಾನಮಾನದ ವಿಚಾರ ಹೈ ಕಮಾಂಡ್ ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದರು.
ತಂಗನಹಳ್ಳಿ ಮಠದ ಬಸವಲಿಂಗ ಸ್ವಾಮೀಜಿ, ಗವಿರಾಜೇಂದ್ರ ಮಠದ ಕರಿಬಸವ ಸ್ವಾಮೀಜಿ, ಚಿಕ್ಕತೊಟ್ಲುಕೆರೆ ಅಟವಿ ಸ್ವಾಮೀಜಿ, ಮೌಲ್ವಿಗಳಾದ ಮುಫ್ತಿ ಮೊಹಮ್ಮದ್ ಖುರ್ಬಾನ್ ಅಸಾದಿ, ಷರೀಫ್, ಕ್ರಿಶ್ಚಿಯನ್ ಸಮುದಾಯದ ಫಾದರ್ ಬಾರ್ಥಾಲೋಮ್ಯೂ, ಪಾಸ್ಟರ್ ಪಿಂಟೋ ಸೇರಿದಂತೆ 25ಕ್ಕೂ ಹೆಚ್ಚು ಜನರು ಪರಮೇಶ್ವರ್ ಅವರಿಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಶುಭ ಹಾರೈಸಿದರು.












Click it and Unblock the Notifications