ಬಿಜೆಪಿ-ಜೆಡಿಎಸ್ ನಡುವೆ ಹೊಂದಾಣಿಕೆಯ ಗೊಂದಲ

ಎಚ್.ಡಿ.ಕುಮಾರಸ್ವಾಮಿ ಅವರಿಂದ ಮೈತ್ರಿಯ ಪ್ರಸ್ತಾಪ ಬಂದಿದೆ. ಈ ಬಗ್ಗೆ ಪಕ್ಷದ ವರಿಷ್ಠ ನಾಯಕರು ತೀರ್ಮಾನಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಉಭಯ ಪಕ್ಷಗಳ ನಡುವೆ ಮೈತ್ರಿಯ ಮಾತುಕತೆ ಜಾರಿಯಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ.
ಜೆಡಿಎಸ್ ವಿಧಾನಪರಿಷತ್ತಿನ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವುದು ಮೈತ್ರಿ ಮಾತುಕತೆಯ ಫಲ ಎಂದು ಬಣ್ಣಿಸಲಾಗುತ್ತಿದೆ.
ಬಿಜೆಪಿಯು ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿರುವ ತನ್ನ ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆಯುವ ಮೂಲಕ ಜೆಡಿಎಸ್‌ಗೆ ನೆರವಾಗುವ ಸಾಧ್ಯತೆಯೂ ಇದೆ. ನಾಮಪತ್ರ ವಾಪಸ್ ಪಡೆಯಲು ಬುಧವಾರ ಕೊನೆಯ ದಿನವಾಗಿದ್ದು, ಅಂದು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಜೆಡಿಎಸ್ ಗೆ ಅನಿವಾರ್ಯ : ತನ್ನ ಎರಡೂ ಕ್ಷೇತ್ರಗಳ ಲೋಕಸಭೆ ಉಪ ಚುನಾವಣೆಯಲ್ಲಿ ಗೆಲ್ಲುವುದು ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿದೆ. ಅಲ್ಲದೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದು, ಬಿಜೆಪಿ ಸಹಾಯ ಸಿಕ್ಕರೆ ಅವರ ಗೆಲುವು ಸುಲಭವಾಗಬಹುದು.
ಆದ್ದರಿಂದ ಮೈತ್ರಿ ಮಾತುಕತೆಯನ್ನು ದೇವೇಗೌಡರು ನಿರಾಕರಿಸಿದರೂ ಬಿಜೆಪಿ ನಾಯಕರು ಎಚ್.ಡಿ.ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿ, ಮೈತ್ರಿ ಮಾಡಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸುವಂತಿಲ್ಲ. (ಬಿಜೆಪಿ ಜೊತೆ ಮೈತ್ರಿ ಮುರಿದ ದೇವೇಗೌಡರು)
ಸಿದ್ದರಾಮಯ್ಯ ಕಿಡಿ : ಉಪ ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಪಕ್ಷದ ಜಾತ್ಯತೀತ ಮುಖವಾಡ ಕಳಚಿ ಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಿಜೆಪಿ ಜತೆ ಸರ್ಕಾರ ನಡೆಸಿ ಪಾಠ ಕಲಿತಿದ್ದೇನೆ ಎನ್ನುವ ಕುಮಾರಸ್ವಾಮಿ ಪಕ್ಷದೊಂದಿಗೆ ಮತ್ತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಉಭಯ ಪಕ್ಷಗಳ ನಡುವೆ ಮೈತ್ರಿ ನಡೆದಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಜೆಡಿಎಸ್ ಪಕ್ಷಕ್ಕೆ ಜನರು ಉಪ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications