ತೆಲಂಗಾಣ ಪ್ರತಿಭಟನೆ, ಕೆಎಸ್ಆರ್ ಟಿಸಿಗೆ ನಷ್ಟ

ಆಂಧ್ರಪ್ರದೇಶದಲ್ಲಿ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ತಕ್ಷಣ ಪ್ರತಿಭಟನೆಗಳು ಪ್ರಾರಂಭವಾಗಿವೆ. ರಾಯಲಸೀಮೆ ಮತ್ತು ಇತರ ಪ್ರದೇಶಗಳಿಗೆ ತೆರಳುವ ಬಸ್ ಸಂಪರ್ಕವನ್ನು ಕೆಎಸ್ಆರ್ ಟಿಸಿ ಸ್ಥಗಿತಗೊಳಿಸಿದೆ. ಇದರಿಂದ ನಷ್ಟ ಉಂಟಾಗುತ್ತಿದೆ.
ನೆರೆಯ ಆಂಧ್ರಪ್ರದೇಶದ ಹೈದರಾಬಾದ್, ತಿರುಪತಿ, ವಿಶಾಖಪಟ್ಟಣ ಸೇರಿದಂತೆ ಪ್ರಮಖ ನಗರಗಳಿಗೆ ತೆರಳುವ ವೋಲ್ವೋ ಸೇರಿದಂತೆ ಕೆಎಸ್ಆರ್ ಟಿಸಿಯ ಹೈಟೆಕ್ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ದಿನಕ್ಕೆ ಸುಮಾರು 40 ಲಕ್ಷ ರೂ.ಗಳ ನಷ್ಟ ಉಂಟಾಗುತ್ತಿದೆ.
ಜು.31ರಂದು ಆಂಧ್ರಪ್ರದೇಶದಲ್ಲಿ ಪ್ರತಿಭಟನೆಗಳು ಪ್ರಾರಂಭವಾದ ತಕ್ಷಣ ಎಲ್ಲಾ ಬಸ್ ಸೇವೆಗಳನ್ನು ಕೆಎಸ್ಆರ್ ಟಿಸಿ ಸ್ಥಗಿತಗೊಳಿಸಿತ್ತು. ಸದ್ಯ ಪ್ರತಿಭಟನೆ ಕಡಿಮೆ ಇರುವ ಪ್ರದೇಶಗಳಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಆದರೆ, ಹೈಟೆಕ್ ಬಸ್ ಗಳ ಸಂಚಾರ ಪ್ರಾರಂಭಿಸಿಲ್ಲ.
ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ್ ಪ್ರಸಾದ್ ಹೇಳುವಂತೆ, ದಿನದಿಂದ ದಿನಕ್ಕೆ ಸಂಸ್ಥೆಗೆ ನಷ್ಟ ಹೆಚ್ಚಾಗುತ್ತಿದೆ. ಜು.31ರಿಂದ ಇದುವರೆಗೂ ಸಂಸ್ಥೆ ಸುಮಾರು 2 ಕೋಟಿ ರೂ.ಗಳ ನಷ್ಟ ಅನುಭವಿಸಿದೆ ಎಂದು ಮಾಹಿತಿ ನೀಡುತ್ತಾರೆ. (ತೆಲಂಗಾಣ ರಾಜ್ಯ ರಚನೆಗೆ ಯುಪಿಎ ಒಪ್ಪಿಗೆ)
ಆಂಧ್ರಪ್ರದೇಶದಲ್ಲಿ ಪರಿಸ್ಥಿತಿ ತಿಳಿಗೊಳ್ಳವ ತನಕ ಬಸ್ ಸಂಚಾರ ಆರಂಭಿಸಬಾರದು ಎಂದು ಸಂಸ್ಥೆ ತೀರ್ಮಾನಿಸಿದೆ. ಆಂಧ್ರದಲ್ಲಿ ಪ್ರತಿಭಟನೆ ಕಾವು ಇನ್ನೂ ಇಳಿದಿಲ್ಲ. ಆದ್ದರಿಂದ ಸಂಸ್ಥೆಗೆ ನಷ್ಟವಾಗುತ್ತಿದೆ.
ಬಸ್ ಸಂಚಾರ ಪ್ರಾರಂಭಿಸಿದರೆ ಪ್ರತಿಭಟನೆಯಲ್ಲಿ ಪ್ರಯಾಣಿಕರು ಸಿಲುಕಬಹುದು ಮತ್ತು ಬಸ್ ಗಳಿಗೆ ಹಾನಿ ಉಂಟಾಗಬಹುದು ಎಂಬುದು ಸಂಸ್ಥೆಯ ಕಾಳಜಿ. ಆದ್ದರಿಂದ ಬಸ್ ಗಳ ಸಂಚಾರ ಆರಂಭಿಸಿಲ್ಲ. ಇದರಿಂದ ಸಾಕಷ್ಟು ನಷ್ಟ ಉಂಟಾಗುತ್ತಿದೆ.
ಮಂತ್ರಾಲಯ ಭಕ್ತರ ಪರದಾಟ : ರಾಯಚೂರು ಜಿಲ್ಲೆಯ 7 ಡಿಪೋಗಳಿಂದ ಮಂತ್ರಾಲಯಕ್ಕೆ ಹೋಗುವ 19 ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರು ದುಬಾರಿ ಬೆಲೆ ತೆತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಾಗಿದೆ.
ಕರ್ನೂಲ್, ಮಂತ್ರಾಲಯ, ಆದೋನಿ, ಎಮ್ಮಿಗನೂರು, ಉರುಕುಂದ, ಶ್ರೀಶೈಲಂ ಮುಂತಾದ ಸ್ಥಳಗಳಿಗೆ ತೆರಳುವ 60 ಬಸ್ ಗಳು ರಾಯಚೂರು ಡಿಪೋದಲ್ಲಿ 6 ದಿನಗಳಿಂದ ನಿಂತಿವೆ ಇದರಿಂದಲೂ ಕೆಎಸ್ಆರ್ ಟಿಸಿಗೆ ಸುಮಾರು 2 ಲಕ್ಷ ರೂ. ನಷ್ಟವಾಗುತ್ತಿದೆ.











Click it and Unblock the Notifications