2004ರ ದೇವೇಗೌಡ ಸೋನಿಯಾ ಭೇಟಿ ರಹಸ್ಯ ಬಹಿರಂಗ
ಬೆಂಗಳೂರು, ಆ 5: ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ದೇವೇಗೌಡ ಮತ್ತೆ ಆಖಾಡಕ್ಕೆ ಇಳಿದಿದ್ದಾರೆ. ಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ.
2004ರಲ್ಲಿ ತಾನು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆಯ ವಿವರವನ್ನು ಗೌಡ್ರು ಬಹಿರಂಗ ಪಡಿಸಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಪದವಿ ತಪ್ಪಲು ನಾನು ಕಾರಣನಲ್ಲ. ಅಂದು ಸೋನಿಯಾಜಿ ಅವರನ್ನು ಭೇಟಿ ಮಾಡಿದಾಗ ಸಿದ್ದು ಸಿಎಂ ಆಗಬೇಕೆಂದು ಪಟ್ಟು ಹಿಡಿದವನು ನಾನು ಎನ್ನುವ ಸತ್ಯವನ್ನು ಸಿದ್ದು ಅರಿತುಕೊಳ್ಳಲಿ ಎಂದು ಹೇಳಿದ್ದಾರೆ.
ಟಿವಿ9 ಚಕ್ರವ್ಯೂಹ (ಭಾನುವಾರದ ಸಂಚಿಕೆ, ಆ 4) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ದೇವೇಗೌಡ, ಕಾಶ್ಮೀರದಲ್ಲಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರನ್ನು ಸಿಎಂ ಮಾಡಿದಂತೆ ಸಿದ್ದರಾಮಯ್ಯನವರನ್ನು ಸಿಎಂ ಮಾಡಿ ಎಂದು ಪಟ್ಟು ಹಿಡಿದಿದ್ದೆ. ಅಂದು ನಾನು ಸೋನಿಯಾರವರನ್ನು ಭೇಟಿಯಾಗಿದ್ದಾಗ ನನ್ನ ಜೊತೆ ಸಿಂಧ್ಯಾ ಮತ್ತು ಎಸ್ ಆರ್ ಬೊಮ್ಮಾಯಿ ಕೂಡಾ ಇದ್ದರು.
ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆಯಾಗಿ ಆಯ್ಕೆಯಾದಾಗ ಅವರನ್ನು ಅಭಿನಂದಿಸಲು ಹೋಗಿದ್ದೆ. ನನ್ನ ಜೊತೆ ಸಿದ್ದು ಕೂಡಾ ಇದ್ದರು. ಮೊದಲ ದಿನ ನನ್ನ ಪ್ರಸ್ತಾಪಕ್ಕೆ ಸೋನಿಯಾ ಒಪ್ಪಲಿಲ್ಲ.
ಸತತ ಐದು ದಿನ ದೆಹಲಿಯಲ್ಲಿದ್ದು ಅವರ ಮನವೊಲಿಸಲು ಪ್ರಯತ್ನಿಸಿದ್ದೆ. ಪ್ರತಿ ಬಾರಿ ಅವರನ್ನು ಭೇಟಿ ಯಾದಾಗಲೂ ಅಹಮದ್ ಪಟೇಲ್ ಇರುತ್ತಿದ್ದರು. ನನ್ನ ಪ್ರಯತ್ನ ಫಲಿಸದಿದ್ದಾಗ ಶರದ್ ಪವಾರ್ ಮುಖಾಂತರ ಪ್ರಯತ್ನಿಸಿದೆ.
ಸ್ಲೈಡಿನಲ್ಲಿ ಓದಿ..

ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಚಿಂತನೆ
ಇದು ಯಾವುದೂ ವರ್ಕೌಟ್ ಆಗದ ಹಿನ್ನಲೆಯಲ್ಲಿ ನಾವು ಬೆಂಗಳೂರಿಗೆ ಬಂದೆವು. ನಮ್ಮ ಶಾಸಕರೆಲ್ಲಾ ರಿಸಾರ್ಟಿನಲ್ಲಿ ಮೀಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡೋಣ ಎನ್ನವ ವಿಷಯ ಕೂಡಾ ಪ್ರಸ್ತಾಪವಾಯಿತು. ನಾನು ಬಿಜೆಪಿಯ ವಿರೋಧಿಯಾಗಿರುವುದರಿಂದ ಯಾವ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡಬಾರದೆಂದು ಸಭೆಯಿಂದ ಹೊರ ನಡೆದೆ.

ಗೌಡ - ಸೋನಿಯಾ ಭೇಟಿ
ಕಾಂಗ್ರೆಸ್ ಪಕ್ಷದಿಂದ 65 ಶಾಸಕರು ಮತ್ತು ನಮ್ಮ ಪಕ್ಷದಿಂದ 58 ಶಾಸಕರು ಆಯ್ಕೆಯಾಗಿದ್ದರು. ನಂತರ ಮರುದಿನವೇ ನನಗೆ ದೆಹಲಿಯಿಂದ ಮತ್ತೆ ಬುಲಾವ್ ಬಂತು. ಸಿದ್ದುಗೆ ಬೆಂಬಲ ನೀಡಬೇಕು ಎನ್ನುವ ಪ್ರಸ್ತಾಪಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೊಪ್ಪು ಹಾಕಲೇ ಇಲ್ಲ. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಧರಂಸಿಂಗ್ ಮುಖ್ಯಮಂತ್ರಿ ಆಗುವುದಕ್ಕೆ ಷರತ್ತಿನ ಬೆಂಬಲ ನೀಡಿದೆ. ಇನ್ನಾದರೂ ಈ ಸತ್ಯವನ್ನು ಸಿದ್ದು ಅರಿತುಕೊಳ್ಳಲಿ ಎಂದು ಗೌಡ್ರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸಿದ್ದುಗೆ ಒಳ್ಳೆದಾಗಲಿ
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ನಮ್ಮಲ್ಲಿಂದ ವಲಸೆ ಹೋದರು. ಅಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ದೊರಕಿದೆ. ಅವರು ರಾಜ್ಯ ಮೆಚ್ಚುವ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಎಸ್ ಎಂ ಕೃಷ್ಣ ಮತ್ತು ಯಡಿಯೂರಪ್ಪ ಸಿಎಂ ಆದಾಗ ನನ್ನ ಬಳಿ ಸೌಜನ್ಯದ ಭೇಟಿ ನೀಡಿದ್ದರು. ಸಿದ್ದರಾಮಯ್ಯ ಅವರಿಗೆ ಬಹುಷ: ಕೆಲಸದ ಒತ್ತಡ ವಿರುವುದರಿಂದ ನನ್ನನ್ನು ಭೇಟಿಯಾಗಲು ಸಾಧ್ಯವಾಗದೇ ಇರಬಹುದು. ತೆಂಗು ಬೆಳೆಗಾರರು ಅನುಭವಿಸುತ್ತಿರುವ ತೊಂದರೆಯ ಬಗ್ಗೆ ಸಿಎಂ ಸಿದ್ದರಾಮಯ್ಯವರಿಗೆ ಪತ್ರ ಬರೆದಿದ್ದೆ. ಪತ್ರಕ್ಕೆ ಸಿಎಂ ಕಚೇರಿಯಿಂದ ನನಗೆ ಕನಿಷ್ಠ acknowledgement ಕೂಡಾ ಬಂದಿಲ್ಲ. ಹಗೆ ಸಾಧಿಸುವುದು ಇಂತಹ ವಿಷಯಗಳಲಲ್ಲ ಎಂದು ದೇವೇಗೌಡರು ಈ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನನಗೆ ಪುತ್ರ ವ್ಯಾಮೋಹವಿಲ್ಲ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಕುಮಾರಸ್ವಾಮಿ ಸತತ ಎರಡು ವರ್ಷಗಳಿಂದ ರಾಜ್ಯ ಸುತ್ತಿ ಪಕ್ಷವನ್ನು ಸಂಘಟಿಸಿದರು. ಏಕಾಂಗಿಯಾಗಿ ಕುಮಾರಸ್ವಾಮಿ ಹೋರಾಡಿದರು. ಆ ಸಮಯಕ್ಕೆ ಸರಿಯಾಗಿ ನನಗೆ ಆರೋಗ್ಯ ಹದೆಗೆಟ್ಟಿತ್ತು. ನನಗೆ ಪುತ್ರ ವ್ಯಾಮೋಹವಿಲ್ಲ, ಬಹಳಷ್ಟು ಬಾರಿ ಕಿವಿ ಹಿಂಡುವ ಕೆಲಸವನ್ನು ಮಾಡಿದ್ದೇನೆ. ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರಕಾರ ನಡೆಸಿದ್ದು ನನ್ನ ರಾಜಕೀಯ ವೃತ್ತಿ ಜೀವನದ ಕರಾಳ ಅಧ್ಯಾಯ ಎಂದು ಗೌಡ್ರು ಹೇಳಿದ್ದಾರೆ.

ಉಪಚುನಾವಣೆ
ಈ ಉಪಚುನಾವಣೆ ಯಾರಿಗೂ ಬೇಕಾಗಿರಲಿಲ್ಲ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ಸುತರಾಂ ಇಷ್ಟವಿರಲಿಲ್ಲ. ಆದರೆ ಈ ಎರಡೂ ಕ್ಷೇತ್ರದಲ್ಲಿ ನಾವು ಗೆದ್ದಿದ್ದೆವು. ನಾವು ಸ್ಪರ್ಧಿಸದಿದ್ದರೆ ಜನತೆಗೆ ತಪ್ಪು ಸಂದೇಶ ಹೋದಂತಾಗುತ್ತದೆ. ಚುನಾವಣೆಗೆ ಸ್ಪರ್ಧಿಸುವ ಆರ್ಥಿಕ ಸ್ಥಿತಿಯೂ ಅಷ್ಟಾಗಿ ನಮಗಿಲ್ಲ, ಆದರೆ ಕಾರ್ಯಕರ್ತರ ಒತ್ತಡಕ್ಕಾಗಿ ಸ್ಪರ್ಧಿಸಲು ನಿರ್ಧರಿಸಿದೆವು. ನಾನು ಮಂಡ್ಯ ಕ್ಷೇತ್ರದ ಮತ್ತು ಕುಮಾರಸ್ವಾಮಿ ಗ್ರಾಮಾಂತರ ಕ್ಷೇತ್ರದ ಜವಾಬ್ದಾರಿಯನ್ನು ಹೊತ್ತು ಚುನಾವಣೆಗೆ ಸಜ್ಜಾಗುತ್ತೇವೆ ಎಂದು ಗೌಡ್ರು ಹೇಳಿದರು. ಕಾರ್ಯಕ್ರಮದುದ್ದಕ್ಕೂ ಕನಿಷ್ಠ ಹತ್ತು ಬಾರಿ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಗೌಡ್ರು ಹೇಳುತ್ತಿದ್ದದ್ದು ವಿಶೇಷವಾಗಿತ್ತು.












Click it and Unblock the Notifications