ಯುಪಿಎಯ ಒಡೆದು ಆಳೋ ನೀತಿಗೆ ತೆಲಂಗಾಣ ಧಿಕ್ಕಾರ
ಹೈದರಾಬಾದ್, ಜು.29: ಮುತ್ತಿನ ನಗರಿ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ಕೇಂದ್ರಾಡಳಿತ ಪ್ರದೇಶವಾಗುವುದು ಹಾಗೂ ರಾಯಲ ತೆಲಂಗಾಣ ರಚನೆ ಬಹುತೇಕ ಖಚಿತವಾಗಿದೆ. ಕೇಂದ್ರ ಸರ್ಕಾರದ ಈ ಪ್ರಸ್ತಾಪಕ್ಕೆ ತೆಲಂಗಾಣ ಪರ ಹೋರಾಟಗಾರರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ, ಹೈದರಾಬಾದ್ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ 1000 ಜನರ ಅರೆ ಸೇನಾ ಪಡೆ ಸೇರಿದಂತೆ ಹೆಚ್ಚುವರಿ ಯೋಧರನ್ನು ಹೈದರಾಬಾದಿನಲ್ಲಿ ನಿಯೋಜಿಸಿದೆ.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಇಕ್ಕಟ್ಟಿಗೆ ಸಿಲುಕಿರುವ ಕೇಂದ್ರ ಸರ್ಕಾರ ಆಂಧ್ರಪ್ರದೇಶವನ್ನು ವಿಭಜಿಸುವ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಿದೆ. ಆಗಸ್ಟ್ 5ರೊಳಗೆ ಸ್ಪಷ್ಟ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಆದರೆ, ಯುಪಿಎ ಆತುರವನ್ನು ನೋಡಿದರೆ ನಾಳೆಯೇ ಇದಕ್ಕೆ ಒಂದು ಉತ್ತರ ಕಂಡುಕೊಳ್ಳುವ ಸಾಧ್ಯತೆಯೂ ಇದೆ
ಒಂದು ವೇಳೆ ಆಂಧ್ರಪ್ರದೇಶ ವಿಭಜನೆಯಾದರೆ ಹಾಲಿ ರಾಜಧಾನಿ ಹೈದರಾಬಾದ್ ಯಾವ ರಾಜ್ಯಕ್ಕೆ ಸೇರಬೇಕೆಂಬ ಗೊಂದಲ ಈಗಲೇ ಎದುರಾಗಿದೆ. ಈಗಿರುವ ಪ್ರಕಾರ ಒಂದು ವೇಳೆ ಆಂಧ್ರಪ್ರದೇಶ ಇಬ್ಭಾಗವಾದರೆ ಹೈದರಾಬಾದ್ ತೆಲಂಗಾಣಕ್ಕೆ ಸೇರುತ್ತದೆ. ಆದರೆ ಇದನ್ನು ಒಂದು ಗುಂಪು ಶತಾಯಗತಾಯ ಒಪ್ಪುತ್ತಿಲ್ಲ. ತೆಲಂಗಾಣಕ್ಕೆ ಹೈದರಾಬಾದ್ ಸೇರ್ಪಡೆಯಾಗುವುದನ್ನು ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಸೇರಿದಂತೆ ಅನೇಕರು ವಿರೋಧಿಸುತ್ತಿದ್ದಾರೆ. ರಾಜೀನಾಮೆ ಬೆದರಿಕೆ ಒಡ್ಡಿದ್ದಾರೆ.

ತೆಲಂಗಾಣ ಮತ್ತು ರಾಯಲಸೀಮ ಎಂಬ ಎರಡು ರಾಜ್ಯಗಳನ್ನು ರಚಿಸಿ ತಾತ್ಕಾಲಿಕವಾಗಿ ಎರಡೂ ರಾಜ್ಯಗಳಿಗೆ ಹೈದರಾಬಾದ್ ನಗರವನ್ನೇ ರಾಜಧಾನಿಯನ್ನಾಗಿ ಮಾಡಬೇಕೆಂಬ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ. ಆದರೆ, ಇದನ್ನು ತೆಲಂಗಾಣ ಭಾಗದ ಜನರು ಒಪ್ಪುತ್ತಿಲ್ಲ. ಮುತ್ತಿನ ನಗರಿ ನಮಗೇ ಇರಬೇಕೆಂದು ತೆಲಂಗಾಣದವರು ಪಟ್ಟು ಹಿಡಿದಿದ್ದರೆ, ರಾಯಲಸೀಮ ಭಾಗದ ಜನರು ತಮಗೂ ಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.
ತೆಲಂಗಾಣ ರಾಜ್ಯ 10 ಜಿಲ್ಲೆಗಳನ್ನು ಹೊಂದಿದ್ದು ಹೈದರಾಬಾದ್ ರಾಜಧಾನಿಯಾಗಬೇಕಿದೆ. ಇದಕ್ಕೆ ಈಗ ರಾಯಲ ಸೀಮೆಯ ಅನಂತಪುರ, ಕರ್ನೂಲು ಜಿಲ್ಲೆಗಳು ಸೇರ್ಪಡೆಗೊಳಿಸಲಾಗಿದೆ. ವೈಎಸ್ಸಾರ್ ಪಕ್ಷದ ಹಿಡಿತವಿರುವ ಈ ಪ್ರದೇಶಗಳನ್ನು ತೆಲಂಗಾಣ ಭಾಗಕ್ಕೆ ಸೇರಿ ಹಿಡಿತ ಸಾಧಿಸಲು ಕಾಂಗ್ರೆಸ್ ಚಿಂತಿಸಿದೆ.
ಹೀಗಾಗಿ ಇಕ್ಕಟ್ಟಿಗೆ ಸಿಲುಕಿರುವ ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೂ ನೀಡದೆ ಹೈದರಾಬಾದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲು ಚಿಂತಿಸಿದೆ. ಐದು ವರ್ಷಗಳ ನಂತರ ಪರಿಸ್ಥಿತಿ ಅವಲೋಕಿಸಿ ಯಾರಿಗೆ ನೀಡಬೇಕು ಎಂಬುದನ್ನು ಇತ್ಯರ್ಥಪಡಿಸಲಿದೆ. ಅಲ್ಲಿಯವರೆಗೂ ಹೈದರಾಬಾದ್ ನಗರವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿಸಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಯಾವುದೇ ನಗರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದರೆ ಅಲ್ಲಿ ಯಾವುದೇ ಸರ್ಕಾರದ ಹಿಡಿತವಿರುವುದಿಲ್ಲ. ಉಸ್ತುವಾರಿಗಾಗಿ ಲೆಫ್ಟಿನೆಂಟ್ ಗವರ್ನರ್ ಜನರಲ್ ಅವರನ್ನು ನೇಮಕ ಮಾಡಲಾಗುತ್ತದೆ. ಇನ್ನೊಂದು ಮೂಲದ ಪ್ರಕಾರ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಶುಕ್ರವಾರದಂದು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದ ವೇಳೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಎಲ್ಲೆಡೆ ಕೇಳಿಬರುತ್ತಿದೆ.












Click it and Unblock the Notifications