ಬಿಹಾರ ಬಿಸಿಯೂಟ ದುರಂತದ ಹಿಂದೆ ಬಿಜೆಪಿ ,ಲಾಲೂ !
ಪಾಟ್ನಾ, ಜು 23: ಬಿಹಾರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಧ್ಯಾಹ್ನದ ಬಿಸಿಯೂಟ ದುರಂತದ ಹಿಂದಿರುವ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಲು ಇದುವರೆಗೆ ವಿಫಲವಾಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರಕಾರ, ಘಟನೆಯ ಹಿಂದೆ ಬಿಜೆಪಿ ಮತ್ತು ಲಾಲೂ ಪಕ್ಷದ ಮೇಲೆ ಸಂಶಯ ವ್ಯಕ್ತ ಪಡಿಸುತ್ತಿದೆ.
ಈ ಭಾರೀ ದುರಂತವನ್ನು ರಾಜಕೀಯವಾಗಿ ದುರ್ಲಾಭ ಪಡೆದುಕೊಳ್ಳಲು ಬಿಜೆಪಿ ಮತ್ತು ಆರ್ ಜೆಡಿ ಪಕ್ಷ ರಹಸ್ಯ ಒಳ ಒಪ್ಪಂದ ಮಾಡಿಕೊಂಡಿದೆ. ಈ ದುರಂತದ ಹಿಂದೆ ಈ ಎರಡೂ ಪಕ್ಷಗಳ ಕೈವಾಡ ಇರಬಹುದು ಎನ್ನುವ ಶಂಕೆಯನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವ್ಯಕ್ತ ಪಡಿಸಿದ್ದಾರೆ.
ಸೋಮವಾರ (ಜು 22) ನಡೆದ ಜೆಡಿಯು ಪಕ್ಷದ ಸಭೆಯಲ್ಲಿ ಬೋದಗಯಾದಲ್ಲಿ ನಡೆದ ಸರಣಿ ಸ್ಫೋಟ ಮತ್ತು ಛಾಪ್ರಾ ಮಧ್ಯಾಹ್ನದ ಬಿಸಿಯೂಟ ದುರಂತದ ಹಿಂದೆ ಮೇಲ್ನೋಟಕ್ಕೆ ಬಿಜೆಪಿ ಮತ್ತು ಆರ್ ಜೆಡಿ ನಡುವೆ ಒಳ ಒಪ್ಪಂದವಾಗಿರುವುದು ಸ್ಪಷ್ಟವಾಗುತ್ತಿದೆ.

ಈ ದುರಂತ ಸಂಭವಿಸಿದ ನಂತರ ಬಿಜೆಪಿ ರಾಜ್ಯ ಬಂದಿಗೆ ಕರೆ ನೀಡುತ್ತದೆ. ಊಟದಲ್ಲಿ ಕ್ರಿಮಿನಾಶಕ ಬೆರೆತಿರುವುದು ವಿಧಿವಿಜ್ಞಾನ ಪ್ರಯೋಗಾಲಯದಿಂದ ಬಂದ ವರದಿ ಖಚಿತ ಪಡಿಸಿದೆ ಎಂದು ಪಕ್ಷದ ಸಭೆಯಲ್ಲಿ ನಿತೀಶ್ ಹೇಳಿದರು ಎಂದು ಜೆಡಿಯು ವಕ್ತಾರ ಹೇಳಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ. ಸರಕಾರದ ವರ್ಚಸ್ಸನ್ನು ಕುಗ್ಗಿಸಲು ಯಾರು ಪ್ರಯತ್ನಿಸುತ್ತಿದ್ದಾರೆ ಎನ್ನುವ ವಿಷಯವನ್ನು ಜನತೆ ಮುಂದಿಡುತ್ತೇವೆ ಬಿಹಾರದ ಕೃಷಿ ಸಚಿವ ನರೇಂದ್ರ ಸಿಂಗ್ ಹೇಳಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ : ನಿತೀಶ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ತಪ್ಪಿತಸ್ಥರನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿ ಹತಾಶರಾಗಿರುವ ನಿತೀಶ್ ಈ ಹೇಳಿಕೆ ದುರದೃಷ್ಟಕರ. ಘಟನೆ ನಡೆದ ಶಾಲೆಗೆ ಇನ್ನೂ ನಿತೀಶ್ ಭೇಟಿ ನೀಡಲಿಲ್ಲ. ರಾಜ್ಯದ ಜನತೆಯ ಮೇಲೆ ಇವರಿಗಿರುವ ಜವಾಬ್ದಾರಿಯಿದು.
ಮಹಾರಾಜ್ ಗಂಜ್ ಕ್ಷೇತ್ರದ ಜನತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ನೀಡಲಿಲ್ಲ ಎನ್ನುವ ಕಾರಣಕ್ಕೆ ನಿತೀಶ್ ದುರಂತ ನಡೆದ ಶಾಲೆಗೆ ಇನ್ನೂ ಭೇಟಿ ನೀಡಲಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಮಹಾರಾಜ್ ಗಂಜ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ಆರ್ ಜೆಡಿ ಅಭ್ಯರ್ಥಿ ವಿರುದ್ದ ಸೋಲುಂಡಿದ್ದರು.(ಪಿಟಿಐ)












Click it and Unblock the Notifications