ಅಡುಗೆ ಅನಿಲ ಸಮಸ್ಯೆಗೆ ಸಿದ್ದು- ಮೊಯ್ಲಿ ಉತ್ತರ
ಬೆಂಗಳೂರು, ಜು.21: ಚಿತ್ರದುರ್ಗ ಮೂಲಕ ಮಂಗಳೂರು ನಗರಕ್ಕೆ ಗ್ಯಾಸ್ ಪೈಪ್ ಲೈನ್ ಅಳವಡಿಸುವ 1400 ಕೋಟಿ ರೂಗಳ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪಮೊಯ್ಲಿ ತಿಳಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ GAIL ಅಧಿಕಾರಿಗಳು ಪಾಲ್ಗೊಂಡು ವಿವಿಧ ಅನಿಲ ಯೋಜನೆ ಬಗ್ಗೆ ಚರ್ಚಿಸಿದರು. ಈ ಯೋಜನೆ ಪೂರ್ಣಗೊಂಡರೆ ಅಡುಗೆ ಅನಿಲ ಸಿಲೆಂಡರ್ ಸಮಸ್ಯೆಗೆ ಪರಿಹಾರ ಸಿಗಲಿದೆ.
ರಾಜ್ಯದಲ್ಲಿ ಚಾಲನೆಯಲ್ಲಿರುವ ವಿವಿಧ ಅನಿಲ ಯೋಜನೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಯ್ಲಿ, ಕರ್ನಾಟಕದಲ್ಲಿ ಅನಿಲಾಧಾರಿತ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಚಿತ್ರದುರ್ಗದಿಂದ ಬಳ್ಳಾರಿ ಜಿಲ್ಲೆಗೆ ಗ್ಯಾಸ್ ಪೈಪ್ ಲೈನ್ ಅಳವಡಿಸುವ 700 ಕೋಟಿ ರೂ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದೆ. ಇದೇ ಮಾದರಿಯಲ್ಲಿ ಚಿತ್ರದುರ್ಗ ದಿಂದ ಶಿವಮೊಗ್ಗ-ಉಡುಪಿ ಮಾರ್ಗವಾಗಿ ಮಂಗಳೂರಿಗೆ ಸುಮಾರು 350 ಕಿಲೋಮೀಟರ್ ಉದ್ದದ ಪೈಪ್ ಲೈನ್ ಅಳವಡಿಸುವ ಯೋಜನೆಗೆ 1400 ಕೋಟಿ ರೂ ಖರ್ಚಾಗಲಿದ್ದು ಈ ಸಂಬಂಧ ಯೋಜನಾ ವರದಿ ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಟೆಕ್ನಾಲಜಿ ಸಂಸ್ಥೆ ಆರಂಭಿಸಲು ನಿರ್ಧರಿಸಲಾಗಿದೆ. ಸುಮಾರು 350 ಕೋಟಿ ರೂ ವೆಚ್ಚದ ಈ ಯೋಜನೆಗೆ 200 ಎಕರೆ ಜಮೀನಿನ ಅಗತ್ಯವಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಸಂಸ್ಥೆ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು.
ಇಂಡಿಯನ್ ಇನ್ ಸ್ಟಿಟ್ಯೂಟ್ ಮಾದರಿಯಲ್ಲೇ ಪೆಟ್ರೋಲಿಯಂ ಟೆಕ್ನಾಲಜಿ ಇನ್ಸ್ ಸ್ಟಿಟ್ಯೂಟ್ ಕಾರ್ಯನಿರ್ವಹಿಸಲಿದ್ದು ಪೆಟ್ರೋಲಿಯಂ, ಅನಿಲ ಹಾಗೂ ಫೈರ್ ಸೇಫ್ಟಿಗೆ ಸಂಬಂಧಿಸಿದಂತೆ ಪ್ರಯೋಗಶೀಲ ತರಬೇತಿ ಹಾಗೂ ಸಂಶೋಧನೆಗಳಿಗೆ ಅವಕಾಶ ದೊರೆಯಲಿದೆ. ಇದರಿಂದ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಮನ್ನಣೆ ಗಳಿಸಲಿದೆ ಎಂದು ಹೇಳಿದರು.
ಬೆಂಗಳೂರು ನಗರದ ಸುತ್ತಮುತ್ತಲಿನ 50 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯ ಪ್ರದೇಶಗಳಿಗೆ ಗ್ಯಾಸ್ ಪೈಪ್ ಲೈನ್ ನ ಸಂಪರ್ಕ ದೊರೆತಿದೆ. ಮುಂದಿನ ಆರು ತಿಂಗಳಿನಲ್ಲಿ ಗೃಹ ಬಳಕೆ ಅನಿಲವನ್ನು ಪೈಪ್ ಲೈನ್ ಮೂಲಕ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications