ಪೆಟ್ರೋಲ್ ದರ ಹಚ್ಚಿದ ಬೆಂಕಿ ಆರಿಸಲು 12 ಟಿಪ್ಸ್
ವಾಹನ ಓಡಿಸುವವರಿಗೆ ಒಂದೇ ಪ್ರಶ್ನೆ ಹಗಲು ರಾತ್ರಿ ಕೊರೆಯುತ್ತಿರುತ್ತದೆ. ಅದೇನೆಂದರೆ, ಪೆಟ್ರೋಲ್ ದರ ಹೀಗೇ ಏರುತ್ತ ಹೋದರೆ ಮುಂದೆ ಹೇಗೆ? ಎಂಬುದು. ಹದಿನೈದು ದಿನಕ್ಕೊಮ್ಮೆ ಪರಿಷ್ಕರಣೆಯಾಗುವ ಇಂಧನ ದರ ಬಡ ಮತ್ತು ಮಧ್ಯಮ ವರ್ಗದವರ ಜೇಬಿಗೆ ಮತ್ತು ಜೀವನಕ್ಕೆ ಬೆಂಕಿ ಹಚ್ಚಿದೆ.
ಮತ್ಯಾವಾಗ ಜಾಸ್ತಿ ಮಾಡುತ್ತಾರೋ ಎಂಬ ಆತಂಕದಲ್ಲಿಯೇ ಜನರು ಬದುಕುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ, ಪೆಟ್ರೋಲ್ ದರ ಲೀಟರಿಗೆ ಸೆಂಚುರಿ ಬಾರಿಸುವ ದಿನ ದೂರವಿಲ್ಲ. ಅದು ಆಗುವುದು ನಮ್ಮ ಬೆಂಗಳೂರಿನಲ್ಲೇ ಮೊದಲು.
ಒಂದು ಕಡೆ ರುಪಾಯಿ ಮೌಲ್ಯ ಕಳೆದುಕೊಳ್ಳುತ್ತ ಇಡೀ ದೇಶದ ಆರ್ಥಿಕತೆಗೆ ಧಕ್ಕೆ ತರುತ್ತಿದ್ದರೆ, ದಿನನಿತ್ಯ ಏರುತ್ತಿರುವ ಇಂಧನ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರ ನೆಮ್ಮದಿಯನ್ನು ಬಸಿದುಹಾಕುತ್ತಿವೆ. ಜನರು ಕೂಡ ಏನೂ ಮಾಡಲಾಗದೆ ಕಂಗಾಲಾಗಿದ್ದಾರೆ. "ಮಾಡೋದೇನು" ಅಂತ ಗೊಣಗಿಕೊಳ್ಳುತ್ತ ಜೀವನದ ಬಂಡಿ ಎಳೆದುಕೊಳ್ಳುತ್ತ ಸಾಗುತ್ತಿದ್ದಾರೆ.
ಆದರೆ, ಒಂದು ಮಾತು ನಮ್ಮ ಗಮನದಲ್ಲಿರಬೇಕು. ನಮ್ಮನ್ನೇ ನಾವು ನಿಯಂತ್ರಣದಲ್ಲಿಟ್ಟುಕೊಂಡರೆ ಜೀವನವನ್ನು ಸಹ್ಯವಾಗಿ ಜೀವಿಸಬಹುದು. ಇಂಧನ ದರ ಏರಿಕೆಯ ಬಗ್ಗೆ ಗೊಣಗಾಟ ಮಾಡದೆ ಕೆಲ ಸಂಗತಿಗಳನ್ನು ಮನದಲ್ಲಿ ಇಟ್ಟುಕೊಂಡು, ಅವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಖಂಡಿತ ಸಾಧ್ಯ.
ಆದರೆ, ಇದು ನಮ್ಮಿಂದ ಸಾಧ್ಯವೆ? ಈ ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಇಲ್ಲಿ ಇಂಧನ ಉಳಿಕೆಗೆ ಕೆಲ ಟಿಪ್ಸುಗಳನ್ನು ನೀಡಲಾಗಿದೆ. ಸಾಧ್ಯವಾದರೆ ರೂಢಿಸಿಕೊಳ್ಳಿರಿ. ಪೆಟ್ರೋಲ್ ಜೊತೆಗೆ ಹಣದ ಉಳಿತಾಯವನ್ನೂ ಮಾಡಿರಿ. ಬೀದಿಯಲ್ಲಿ ನಿಂತು ಹೋರಾಟ ನಮ್ಮಿಂದ ಸಾಧ್ಯವಿಲ್ಲ, ಕನಿಷ್ಠ ಈ ಟಿಪ್ಸ್ ಗಳನ್ನಾದರೂ ಜಾರಿಗೆ ತರಬಹುದಲ್ಲ?

ಬೆಳಗ್ಗೆ ಅಥವಾ ರಾತ್ರಿ ಇಂಧನ ತುಂಬಿಸಿ
ಇಂಧನವನ್ನು ಬಿಸಿಲು ಜಾಸ್ತಿಯಾದಾಗ ತುಂಬಿಸುವುದಕ್ಕಿಂತ ಬೆಳಗಿನ ಜಾವ ಇನ್ನೂ ಬಿಸಿಲೇರದಿರುವಾಗ ಅಥವಾ ರಾತ್ರಿ ಹೊತ್ತಿನಲ್ಲಿ ತುಂಬಿಸುವುದು ಉತ್ತಮ. ಇದು ಅನೇಕ ಜನರಿಗೆ ಗೊತ್ತಿರುವುದಿಲ್ಲ. ಬಿಸಿಲು ಇದ್ದಾಗ ಇಂಧನ ಹಿಗ್ಗಿ ವಿಸ್ತಾರವಾಗುವುದರಿಂದ ಹೆಚ್ಚಿನ ಪೆಟ್ರೋಲ್ ದೊರೆಯುವುದಿಲ್ಲ. ಅದೇ ಬೆಳಗಿನ ಜಾವ ಅಥವಾ ರಾತ್ರಿ ತುಂಬಿಸಿದರೆ ಇಂಧನ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ.

ಅರ್ಧ ಟ್ಯಾಂಕ್ ಇರುವಾಗ ತುಂಬಿಸಿ
ನಮಗೊಂದು ಕೆಟ್ಟ ಚಟವಿರುತ್ತದೆ. ದ್ವಿಚಕ್ರ ವಾಹನವೇ ಆಗಿರಲಿ, ನಾಲ್ಕು ಚಕ್ರಗಳ ವಾಹನವೇ ಇರಲಿ, ರಿಸರ್ವ್‌ನಲ್ಲಿನ ಇಂಧನವೂ ಖಾಲಿಯಾಗಿ ಗಾಡಿಯನ್ನು ಇನ್ನೇನು ತಳ್ಳಬೇಕು ಅನ್ನುವ ಹಂತದಲ್ಲಿ ಪೆಟ್ರೋಲ್ ತುಂಬಿಸಲು ಹೋಗುತ್ತೇವೆ. ಹೀಗೆ ಮಾಡುವುದರಿಂದ ಪೆಟ್ರೋಲ್ ಟ್ಯಾಂಕಿನಲ್ಲಿ ಇರುವ ಗಾಳಿಯಿಂದಾಗಿ ಇರುವ ಪೆಟ್ರೋಲ್ ಕೂಡ ಬೇಗನೆ ಆವಿಯಾಗಿಬಿಡುತ್ತದೆ. ಹಾಗಾಗಿ, ಟ್ಯಾಂಕ್ ಅರ್ಧ ಇರುವಾಗಲೇ, ರಿಸರ್ವ್ ಬರುವ ಮೊದಲೇ ಟ್ಯಾಂಕ್ ತುಂಬಿಸುವುದು ಜಾಣತನ.

ಟ್ಯಾಂಕಿಗೆ ನಿಧಾನವಾಗಿ ಪೆಟ್ರೋಲ್ ತುಂಬಿಸಿ
ಪೆಟ್ರೋಲನ್ನು ತುಂಬಿಸುವಾಗ ಥ್ರಾಟಲ್ ಅನ್ನು ವೇಗವಾಗಿ ಅದುಮಿ ಹಿಡಿಯುವುದರಿಂದ ಪೆಟ್ರೋಲ್ ಆವಿಯಾಗುತ್ತದೆ. ಅಲ್ಲದೆ, ಪೆಟ್ರೋಲ್ ಉಕ್ಕಿ ಹೊರಗೆಬಿದ್ದು ನಷ್ಟವಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ನಿಧಾನವಾಗಿ ಪೆಟ್ರೋಲನ್ನು ತುಂಬಿಸಲು ವಿನಂತಿಸಿಕೊಳ್ಳಿ. ಮತ್ತು ಕೊನೆಯ ಹನಿ ಟ್ಯಾಂಕಿನೊಳಗೆ ಬೀಳುವವರೆಗೆ ತುಂಬಿಸು ಕೊಳವೆ ಅಲ್ಲೇ ಇರುವಂತೆ ನೋಡಿಕೊಳ್ಳಿ (ಸಾಧ್ಯವಾದರೆ).

ಸಂಪಿಗೆ ತುಂಬುವಾಗ ಪೆಟ್ರೋಲ್ ಹಾಕಿಸಬೇಡಿ
ಇದು ಮತ್ತೊಂದು ಎಚ್ಚರಿಕೆಯ ಮಾತು. ಇಂಧನ ಲಾರಿ ಬಂಕಿನಲ್ಲಿ ಸಂಪಿಗೆ ಪೆಟ್ರೋಲನ್ನು ತುಂಬಿಸುವಾಗ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಬೇಡಿ. ಕಲ್ಮಶ ಇರುವ ಪೆಟ್ರೋಲ್ ಅಥವಾ ಸಂಪಿಗೆ ತುಂಬಿಸುವಾಗ ಏಳುವ ಧೂಳು ನಿಮ್ಮ ಪೆಟ್ರೋಲ್ ಟ್ಯಾಂಕನ್ನು ಸೇರಬಹುದು. ಇದರಿಂದ ಗಾಡಿಯ ಕ್ಷಮತೆ ಕಡಿಮೆಯಾಗುತ್ತದೆ ಅಥವಾ ಕೆಟ್ಟುಹೋಗಲೂಬಹುದು.

ವೇಗದಿಂದ ಗಾಡಿ ಚಲಾಯಿಸಬೇಡಿ
ಬೈಕನ್ನಾಗಲಿ, ಕಾರನ್ನಾಗಲಿ ಅತಿಯಾಗಿ ಓಡಿಸಿದರೆ ಪೆಟ್ರೋಲ್ ಜಾಸ್ತಿ ಖರ್ಚಾಗುತ್ತದೆ. ವಾಹನವನ್ನು ನಿಧಾನವಾಗಿ ಓಡಿಸಿ, ಎಕ್ಸಲರೇಟರ್ ಒಮ್ಮೆಲೇ ಜೋರಾಗಿ ಒತ್ತಬೇಡಿ, ಅನಗತ್ಯ ಬ್ರೇಕನ್ನು ಹಾಕಬೇಡಿ ಮತ್ತು ಒಂದೇ ವೇಗದಲ್ಲಿ ಓಡಿಸಲು ರೂಢಿಸಿಕೊಳ್ಳಿ. ಇದರಿಂದ ಇಂಧನ ಉಳಿತಾಯವಾಗುವುದಲ್ಲದೆ, ಅಪಘಾತಗಳನ್ನು ಕೂಡ ತಪ್ಪಿಸಬಹುದು.

ಟೈರಿನ ಗಾಳಿಯನ್ನು ಆಗಾಗ್ ಚೆಕ್ ಮಾಡಿಸಿ
ಟೈರಿನಲ್ಲಿ ಗಾಳಿ ಕಡಿಮೆಯಿದ್ದರೆ ಅಧಿಕ ಮೈಲೇಜ್ ಕೊಡುವುದಿಲ್ಲ. ಬಹಳಷ್ಟು ಜನರು ಇಂಥ ಸಣ್ಣ ವಿಷಯವನ್ನು ಉದಾಸೀನ ಮಾಡುತ್ತಾರೆ. ಆದ್ದರಿಂದ, ಪ್ರತಿ ಹದಿನೈದು ದಿನಗಳಿಗೊಮ್ಮೆ ವಾಹನದ ಚಕ್ರಗಳ ಗಾಳಿಯನ್ನು ಚೆಕ್ ಮಾಡಿಸಿ, ಶಿಫಾರಸು ಮಾಡಿದಂತೆ ಗಾಳಿಯನ್ನು ತುಂಬಿಸಬೇಕು.

ಕಾರನ್ನು ನೆರಳಿನಲ್ಲಿ ಪಾರ್ಕ್ ಮಾಡಿರಿ
ಎಲ್ಲಾದರೂ ಕಾರನ್ನು ನಿಲ್ಲಿಸಬೇಕಾದ ಸಂದರ್ಭ ಬಂದರೆ, ಸಾಧ್ಯವಾದಷ್ಟು ನೆರಳಿನಲ್ಲಿ ವಾಹನವನ್ನು ನಿಲುಗಡೆ ಮಾಡಿರಿ. ಗಿಡದ ನೆರಳಿನಲ್ಲಿ ನಿಲ್ಲಿಸಿದರೆ ಕಾರು ಬೇಗನೆ ತಣ್ಣಗಾಗುತ್ತದೆ. ಇದು ಕೂಡ ಇಂಧನ ಅಧಿಕವಾಗಿ ಬಳಕೆಯಾಗದಂತೆ ತಡೆಯುತ್ತದೆ. ಅಲ್ಲದೆ, ಬಿಸಿಲಿನಲ್ಲಿ ಜಾಸ್ತಿ ಹೊತ್ತು ನಿಲ್ಲಿಸಿದರೆ ಪೆಟ್ರೋಲ್ ಬೇಗ ಆವಿಯಾಗುವ ಸಾಧ್ಯತೆಯೂ ಇರುತ್ತದೆ.

ಗೇರನ್ನು ಬಳಸುವ ರೀತಿ
ವಾಹನ ಕಡಿಮೆ ವೇಗದಲ್ಲಿದ್ದಾಗ ನಾಲ್ಕು ಅಥವಾ ಐದನೇ ಗೇರಿನಲ್ಲಿ ಕಾರನ್ನು ಓಡಿಸುವುದು ಗಾಡಿಗೆ ಹಿತಕರವಲ್ಲ. ಇದರಿಂದ ಇಂಧನ ಹೆಚ್ಚು ಬಳಕೆಯಾಗುತ್ತದೆ. ಬದಲಾಗಿ, ವೇಗಕ್ಕೆ ತಕ್ಕಂತೆ ಗೇರನ್ನು ಬದಲಿಸುತ್ತಿರಬೇಕು. ಇದರಿಂದ ಇಂಜಿನ್ ಮೇಲಿನ ಒತ್ತಡ ಕೂಡ ಕಡಿಮೆಯಾಗುತ್ತದೆ ಮತ್ತು ಹೆಚ್ಚು ದಿನ ಬಾಳಿಕೆ ಬರುತ್ತದೆ.

ಕಾರನ್ನು ಯರ್ರಾಬಿರ್ರಿ ತುಂಬಬೇಡಿ
ಹೇಗಿದ್ರೂ ಕಾರಿದೆಯಲ್ಲ ಎಷ್ಟು ಬೇಕಾದರೂ ಸಾಮಾನು ಸಂಗ್ರಹಿಸಿ ಒಯ್ಯಬಹುದು ಎಂದು ಅನೇಕರು ಅಂದುಕೊಂಡಿರುತ್ತಾರೆ. ಆದರೆ, ಇದು ಇಂಧನ ಉಳಿತಾಯಕ್ಕೆ ಮಾರಕ. ಕಾರನ್ನು ತುಂಬಿದಷ್ಟು ಅದರ ವೇಗ ತಗ್ಗುತ್ತದೆ ಮತ್ತು ಹೆಚ್ಚು ಇಂಧನ ಬಳಕೆಯಾಗುತ್ತದೆ. ಹಾಗಾಗಿ, ಅನಗತ್ಯ ಸಾಮಾನುಗಳನ್ನು ಕಾರಿನಲ್ಲಿ ತುಂಬಲೇಬೇಡಿ. 50ಕ್ಕಿಂತ ಜಾಸ್ತಿ ತೂಕದ ಸಾಮಗ್ರಿಗಳು ಕಾರಿನಲ್ಲಿ ತುಂಬಿದ್ದರೆ ಶೇ.2ರಷ್ಟು ಇಂಧನ ಬಳಕೆ ಜಾಸ್ತಿಯಾಗುತ್ತದೆ.

ಆಗಾಗ ಸರ್ವೀಸ್ ಮಾಡಿಸುತ್ತಿರಿ
ಆವಾಗಾವಾಗ ಸರ್ವೀಸ್ ಮಾಡಿಸುತ್ತಿದ್ದರೆ ಹೆಚ್ಚಿನ ಹಣ ತೆತ್ತಬೇಕಾಗುತ್ತದೆ, ಹೇಗಿದ್ರೂ ಓಡುತ್ತಿದೆಯಲ್ಲ ಎಂದು ಹಲವರು ವಾಹನದ ಸರ್ವೀಸ್ ಮಾಡಿಸುವುದನ್ನು ತಪ್ಪಿಸುತ್ತಿರುತ್ತಾರೆ. ಇದರಿಂದ ಆಗುವ ಲಾಸು ಯಾರಿಗೆ? ಇಂಜಿನ್ ತನ್ನ ಕ್ಷಮತೆ ಕಳೆದುಕೊಳ್ಳುತ್ತದೆ, ಹೆಚ್ಚು ಪೆಟ್ರೋಲನ್ನು ಕುಡಿಯುತ್ತಿರುತ್ತದೆ. ಸೋ, ಆಗಾಗ ವಾಹನವನ್ನು ಸರ್ವೀಸ್ ಮಾಡಿಸುವುದು ತೀರ ಅಗತ್ಯ. ಇಂಜಿನ್ ತೈಲ, ಫಿಲ್ಟರುಗಳನ್ನು ಆಗಾಗ ಬದಲಿಸುತ್ತಿರಿ.

ಸ್ಪಾರ್ಕ್ ಪ್ಲಗ್ ಕೂಡ ಬದಲಿಸುತ್ತಿರಿ
ಸ್ಪಾರ್ಕ್ ಪ್ಲಗ್ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ವಾಹನ ಸರಿಯಾಗಿ ಕಾರ್ಯನಿರ್ವಹಿಸದೆ ಇಂಧನವನ್ನು ಕುಡಿಯುತ್ತಿರುತ್ತದೆ. ಇದನ್ನು ತಪ್ಪಿಸಬೇಕಿದ್ದರೆ, ಸ್ಪಾರ್ಕ್ ಪ್ಲಗ್ ಆಗಾಗ ಕ್ಲೀನ್ ಮಾಡಿಸುತ್ತಿರಬೇಕು. ಅಗತ್ಯ ಬಿದ್ದರೆ ಸ್ಪಾರ್ಕ್ ಪ್ಲಗ್ಗನ್ನು ಬದಲಿಸಬೇಕು. ಆ ಸಮಯದಲ್ಲಿ ಸ್ವಲ್ಪ ಹಣ ಜಾರಿಹೋಗಬಹುದು. ಆದರೆ, ದೀರ್ಘಕಾಲದಲ್ಲಿ ಅದು ಸಾಕಷ್ಟು ಉಪಯೋಗಕ್ಕೆ ಬರುತ್ತದೆ.

ಕಾರ್ ಪೂಲಿಂಗ್ ಮಾಡಿರಿ
ಮೇಲಿನ ಎಲ್ಲ ಕ್ರಮಗಳ ಜೊತೆಗೆ ಸಾಧ್ಯವಾಗುತ್ತಿದ್ದರೆ ಕಾರ್ ಪೂಲಿಂಗ್ ಜಾರಿಗೆ ತನ್ನಿರಿ. ಒಂದೇ ಸ್ಥಳದಲ್ಲಿ ವಾಸಿಸುತ್ತಿರುವ, ಒಂದೇ ಕಚೇರಿಯಲ್ಲಿ ಅಥವಾ ಹತ್ತಿರದ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಕಾರ್ ಪೂಲಿಂಗ್ ಗಿಂತ ಅತ್ಯುತ್ತಮವಾದದ್ದು ಇನ್ನೊಂದಿಲ್ಲ. ಇದರಿಂದ ಸಮಯಪಾಲನೆ ಕೂಡ ಸಾಧ್ಯವಾಗುತ್ತದೆ.












Click it and Unblock the Notifications