ಜಿಆರ್ ವಿಶ್ವನಾಥ್, ಬಿಕೆ ಸುಮಿತ್ರಾ ಸೇರಿ 7 ಗಣ್ಯರಿಗೆ ಡಾಕ್ಟರೇಟ್

ಬೆಂಗಳೂರು ವಿಶ್ವವಿದ್ಯಾಲಯದ 48ನೇ ಘಟಿಕೋತ್ಸವ ಜು.18ರಂದು ನಡೆಯಲಿದ್ದು, ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಸಮಾಜ ಸೇವಾ ವಿಭಾಗದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ನಾಡಿನ ಖ್ಯಾತ ಹಿನ್ನೆಲೆ ಗಾಯಕಿ ಬಿ.ಕೆ ಸುಮಿತ್ರ, ಮಾಜಿ ಕ್ರಿಕೆಟರ್ ಜಿ.ಆರ್ ವಿಶ್ವನಾಥ್, ಆಡಳಿತ ವಿಭಾಗದಲ್ಲಿ ಆದಾಯ ತೆರಿಗೆ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ, ಸಾಹಿತ್ಯ ವಿಭಾಗದಲ್ಲಿ ಸಂಸ್ಕೃತ ಸಾಹಿತಿ ಡಾ. ವನಿತಾ ರಾಮಸ್ವಾಮಿ ಹಾಗೂ ವಿಜ್ಞಾನ ವಿಭಾಗದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಯು.ಆರ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ವಿವಿ ಪ್ರಕಟಣೆ ತಿಳಿಸಿದೆ.
ಡಾಕ್ಟರೇಟ್ ಬೇಡ: ಬೆಂಗಳೂರು ವಿವಿ ತಯಾರಿಸಿದ ಮೊದಲ ಪಟ್ಟಿಯಲ್ಲಿ ಸಾಹಿತಿ ದೇವನೂರು ಮಹಾದೇವ ಹೆಸರು ಇತ್ತು. ಆದರೆ, ಡಾಕ್ಟರೇಟ್ ಬೇಡ ಎಂದು ದೇವನೂರು ಮಹಾದೇವ ಅವರು ಹೇಳಿದ್ದರಿಂದ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿವಿ ಮೂಲಗಳು ಹೇಳಿದೆ. ಇತ್ತೀಚೆಗೆ ಮೈಸೂರು ವಿವಿ ಕೂಡಾ ದೇವನೂರು ಮಹಾದೇವ ಅವರಿಗೆ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಅಲ್ಲೂ ಕೂಡಾ ಗೌರವ ಡಾಕ್ಟರೇಟ್ ಪಡೆಯಲು ನಿರಾಕರಿಸಿದ್ದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜು ಅವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜು.18 ರ ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಇಸ್ರೋ ಅಧ್ಯಕ್ಷ ಕೆ ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಉಪ ಕುಲಪತಿ ಬಿ. ತಿಮ್ಮೇಗೌಡ ಹೇಳಿದರು.
ಕಾಲೇಜು ಮಾನ್ಯತೆ ರದ್ದು: ಬೆಂಗಳೂರು ವಿವಿ ಸಿಂಡಿಕೇಟ್ ಶುಕ್ರವಾರ ಸಭೆ ಸೇರಿ ಹಲವು ಕಾಲೇಜುಗಳ ಮಾನ್ಯತೆ ರದ್ದುಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ. ಕೃಷ್ಣದೇವರಾಯ ವಿವಿ ಕೂಡಾ 6 ಕಾಲೇಜುಗಳಿಗೆ ಪ್ರವೇಶಾತಿ ನಿರ್ಬಂಧ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೆಳಕಂಡ 14 ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ಶಿಫಾರಸು ಮಾಡಿಲ್ಲ:
* ಬೆಂಗಳೂರು ಮ್ಯಾನೇಜ್ಮೆಂಟ್ ಸ್ಟಡೀಸ್ (ಜಯನಗರ)
* ಪ್ರೊಫೆಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್(ಕೆಂಗೇರಿ)
* ಕೆಂಪೇಗೌಡ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸಸ್ (ನಾಗರಭಾವಿ)
* ರಾಮುನಾಸುನಾಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸಸ್ (ಮಂಜುನಾಥನಗರ)
* ಇಂಪ್ಯಾಕ್ಟ್ ಕಾಲೇಜ್ ಆಫ್ ಅಪ್ಲೈಡ್ ಸೈನ್ಸಸ್ (ಕೊಡಿಗೆಹಳ್ಳಿ)
* ಮಹಾರಾಣ ಪ್ರತಾಪ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಇನ್ಫೋ ಸೈನ್ಸ್ (ವಸಂತನಗರ)
* ಶ್ರೀ ವೆಂಕಟೇಶ್ವರ ಕಾಲೇಜ್ (ಕೋಲಾರ)
* ಗುಪ್ತಾ ಕಾಲೇಜು (ಕೋಲಾರ)
* ಐಎ ಅಂಡ್ ಸಿಎ ಪವನ್ ಕಾಲೇಜು (ಕೋಲಾರ)
* ಪಿಐಟಿ ಕಾಲೇಜ್ ಆಫ್ ಎಜುಕೇಷನ್ (ಮಂಡೂರು)
* ಸ್ವಾಮಿ ವಿವೇಕಾನಂದ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಮಂಡೂರು)
* ಗುಡ್ ಶೆಫರ್ಡ್ ಕಾಲೇಜ್ ಆಫ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸಸ್ (ಹೊಸಕೋಟೆ)
* ಕ್ಯಾಪಿಟಲ್ ಕಾಲೇಜ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಕೆಆರ್ ಪುರಂ)
* ಬೆಂಗಳೂರು ಬಿ.ಇಡಿ ಕಾಲೇಜ್ (ಕಣ್ಣೂರು ಅಂಚೆ)












Click it and Unblock the Notifications