ವಿಶಿಷ್ಟ ಭಕ್ಷ್ಯಗಳಿರುವ ಭೋಜನಕ್ಕೆ ರೆಡೀನಾ?
ಬೆಂಗಳೂರು, ಜು. 12 : ವಿವಾಹ ಭೋಜನವಿದು ವಿಶಿಷ್ಟ ಭಕ್ಷ್ಯಗಳಿವು ಬೀಗರಿಗೆ ಔತಣವಿದು ತಗೊಳ್ಳಿ ಎನಗೆ ಒಂದು. ಆಹಾಹಾಹಾಹಾಹಾ ಆಹಾಹಾಹಾಹಾ ಆಹಾಹಾಹಾಹಾ... ಹಾಡನ್ನು ಕೇಳಿದವರಿಗೆ ಕಣ್ಣಮುಂದೆ ಸ್ವಾದಿಷ್ಟ ಭಕ್ಷ್ಯ ಭೋಜನಗಳು ಒಂದೊಂದಾಗಿ ಬರಲು ಪ್ರಾರಂಭಿಸುತ್ತವೆ. ಅಂಥದೊಂದು ರಸದೌತಣಕ್ಕೆ ತಯಾರಾಗಿದ್ದೀರಾ?
ಕಳೆದ ಶತಮಾನದ ಐವತ್ತರ ದಶಕದಲ್ಲಿ (1957) ಮಕ್ಕಳು ಸೇರಿದಂತೆ ದೊಡ್ಡವರನ್ನೂ ಮೋಡಿ ಮಾಡಿದ್ದ ಶಶಿರೇಖಾ ಪರಿಣಯಂ (ಕನ್ನಡದಲ್ಲಿ ಮಾಯಾ ಬಜಾರ್) ತೆಲುಗು ಚಿತ್ರದ ನಾಟಕ ರೂಪದಲ್ಲಿ ಮತ್ತೊಮ್ಮೆ ಆಸ್ವಾದಿಸುವ ಅವಕಾಶ ಬೆಂಗಳೂರಿನ ನಾಟಕ ಪ್ರೇಮಿಗಳಿಗೆ ಬಂದಿದೆ.

ಬೆಂಗಳೂರಿನ ಹಳೆಯ ನಾಟಕ ತಂಡಗಳಲ್ಲಿ ಒಂದಾಗಿರುವ ಬೆಂಗಳೂರು ಲಿಟ್ಲ್ ಥಿಯೇಟರ್ ತಂಡ ಈ ಚಿತ್ರವನ್ನು ನಾಟಕ ರೂಪಕ್ಕಿಳಿಸಿದ್ದು, ಜು.13ರಂದು ಶನಿವಾರ, ವುಡ್ ಲ್ಯಾಂಡ್ ಹೋಟೆಲಿನ ರಾಜಾಜಿ ಹಾಲ್‌ನಲ್ಲಿ ಸಂಜೆ 4.30ಕ್ಕೆ ನಾಟಕ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ನಾಟಕವನ್ನು ಓದುವ ಹವ್ಯಾಸವೇ ವಿಶಿಷ್ಟವಾದದ್ದು. ಅದರಲ್ಲೂ ಅಪಾರ ಜನಪ್ರಿಯತೆ ಗಳಿಸಿದ, ದಿ.ಎನ್.ಟಿ. ರಾಮರಾವ್ ನಟಿಸಿದ್ದ ಮಾಯಾ ಬಜಾರ್ ಚಿತ್ರದ ನಾಟಕವನ್ನು ಓದುವುದು ಇನ್ನೂ ವಿಶಿಷ್ಟವಾದದ್ದು. ನಾಟಕವನ್ನುಓದುವವರು ಪುಟಾಣಿ ಮಕ್ಕಳು. ಶ್ರೋತೃಗಳು ತಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿದೆ.
ಈ ನಾಟಕ ರಚನೆಯಲ್ಲಿ ಮಕ್ಕಳನ್ನೇ ತೊಡಗಿಸಿಕೊಳ್ಳಲಾಗಿದೆ. ಅದೇ ಕಥೆ, ಅವೇ ಪಾತ್ರಗಳು ನಾಟಕದಲ್ಲಿ ಜೀವಂತವಾಗಿ ಬರುತ್ತವೆ. ಆದರೆ, ಒಂದೇ ವಿಶೇಷವೆಂದರೆ, ನಿರೂಪಣೆಯನ್ನು ಆಧುನಿಕ ಶೈಲಿಯಲ್ಲಿ ತರಲಾಗಿದೆ. ಪಾತ್ರಗಳ ಆಯ್ಕೆಗಾಗಿ ನಾಟಕ ಓದುವ ಕಾರ್ಯಕ್ರಮ ಇಟ್ಟುಕೊಂಡಿಲ್ಲ ಎಂದು ಕಾರ್ಯಕ್ರಮದ ಆಯೋಜಕರು ಸ್ಪಷ್ಟಪಡಿಸಿದ್ದಾರೆ. ದಯವಿಟ್ಟು ಗಮನಿಸಿ ನಾಟಕ ಆಂಗ್ಲ ಭಾಷೆಯಲ್ಲಿರುತ್ತದೆ.
ನಾಟಕ ಓದು ಕಾರ್ಯಕ್ರಮದ ವಿವರ
ನಾಟಕ : ಮಾಯಾ ಬಜಾರ್
ಸ್ಥಳ : ವುಡ್ ಲ್ಯಾಂಡ್ ಹೋಟೆಲಿನ ರಾಜಾಜಿ ಹಾಲ್, ರಾಜಾರಾಮ್ ಮೋಹನರಾಯ್ ರಸ್ತೆ, ರಿಚ್ಮಂಡ್ ಟೌನ್, ಬೆಂಗಳೂರು
ಸಮಯ : ಸಂಜೆ 4.30ಕ್ಕೆ
ಭಾಷೆ : ಇಂಗ್ಲಿಷ್












Click it and Unblock the Notifications