ತುಮಕೂರು : ಬಗೆಹರಿಯಿತು ಶವ ಹೂಳುವ ವಿವಾದ!

ಮಂಗಳವಾರ ಬೆಳಗ್ಗೆ ಕುಟುಂಬದವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕುಟುಂಬದವರ ನಿರ್ಧಾರದಿಂದಾಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹಬ್ಬುವ ಭೀತಿ ಕಡಿಮೆಯಾಗಿದ್ದು, ಸೋಮವಾರದಿಂದ ಅನಾಥವಾಗಿ ಬಿದ್ದಿದ್ದ ಶವಕ್ಕೆ ಮುಕ್ತಿ ದೊರೆಯಲಿದೆ.
ಘಟನೆ ಏನು : ಪಟ್ಟನಾಯಕನಹಳ್ಳಿಯ ಜಯಮ್ಮ (70) ಎಂಬ ಮಹಿಳೆ ಸೋಮವಾರ ಮೃತಪಟ್ಟಿದ್ದರು. ಇವರ ದೇಹವನ್ನು ಹೂಳಲು ಸ್ಥಳೀಯ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಆವರಣಕ್ಕೆ ತೆಗೆದುಕೊಂಡು ಹೋದಾಗ ಗ್ರಾಮದಲ್ಲಿ ವಿವಾದ ಪ್ರಾರಂಭವಾಯಿತು.
ಮೃತ ಜಯಮ್ಮ ಕುಟುಂಬದವರು ಮಠಕ್ಕೆ ಜಾಗವನ್ನು ದಾನ ಮಾಡಿದ್ದರು. ಆದ್ದರಿಂದ ಅಲ್ಲಿಯೇ ಶವ ಸಂಸ್ಕಾರ ನಡೆಸುತ್ತೇವೆ ಎಂದು ಜಯಮ್ಮ ಕುಟುಂಬದವರು ಪಟ್ಟು ಹಿಡಿದಿದ್ದರು. ಆದರೆ, ಮಠದ ಜಾಗ ಯಾರಿಗೆ ಸೇರಿದ್ದು ಎಂಬ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಇಲ್ಲಿ ಶವಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಮತ್ತೊಂದು ಜಾತಿಯ ಜನರು ವಿರೋಧ ವ್ಯಕ್ತಪಡಿಸಿದರು.
ಶವ ಸಂಸ್ಕಾರದ ಸಂಬಂಧ ಸೋಮವಾರ ಸಂಜೆ ಎರಡು ಗುಂಪಿನ ನಡುವೆ ವಾಗ್ವಾದ ನಡೆದು, ಶವವನ್ನು ರಸ್ತೆಯಲ್ಲಿಟ್ಟು ಕುಟುಂಬ ಸದಸ್ಯರು ಪ್ರತಿಭಟನೆ ಪ್ರಾರಂಭಿಸಿದರು. ಘಟನೆಯ ಮಾಹಿತಿ ಪಡೆದು ಮಧ್ಯ ಪ್ರವೇಶಿಸಿದ ಪೊಲೀಸರು, ಇದು ಸಾರ್ವಜನಿಕರು ಸಂಚರಿಸುವ ರಸ್ತೆಯಾದ್ದರಿಂದ ಶವವನ್ನು ತೆರವುಗೊಳಿಸಿ ಎಂದು ಕುಟುಂಬದವರಿಗೆ ತಿಳಿಸಿದರು.
ಪೊಲೀಸರ ಮಾತಿಗೂ ಕುಟುಂಬದವರು ಬೆಲೆ ನೀಡದಿದ್ದಾಗ, ಪೊಲೀಸರೇ ಶವವನ್ನು ತೆಗೆದುಕೊಂಡು ಹೋಗಿ, ಜಯಮ್ಮ ಮನೆಯ ಮುಂದೆ ಇಟ್ಟುಬಂದರು. ರಾತ್ರಿ ಪೊಲೀಸರು ಮತ್ತು ಗ್ರಾಮಸ್ಥರು ಜಯಮ್ಮ ಕುಟುಂಬದವರೊಡನೆ ಸಂಧಾನ ನಡೆಸಿದರೂ, ಶವ ಸಂಸ್ಕಾರ ಮಾಡಲು ಅವರು ಒಪ್ಪಲಿಲ್ಲ.
ಘರ್ಷಣೆ ತೀವ್ರ : ಗ್ರಾಮಸ್ಥರು ಮತ್ತು ಜಯಮ್ಮ ಕುಟುಂಬದವರ ನಡುವೆ ಘರ್ಷಣೆ ಹೆಚ್ಚಾಗಿ ಗ್ರಾಮದಲ್ಲಿ ರಾತ್ರಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ ಹೊತ್ತಿಗೆ ಮೃತಪಟ್ಟ ಜಯಮ್ಮ ಅವರ ಶವ ಅನಾಥವಾಗಿ ರಸ್ತೆಯಲ್ಲಿ ಬಿದ್ದಿತ್ತು. ಮೃತದೇಹದ ಶವಸಂಸ್ಕಾರವನ್ನು ಒಂದು ದಿನ ಕಳೆದರೂ ನಡೆಸದ್ದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿತ್ತು.
ಮಂಗಳವಾರ ಎಚ್ಚರಿಕೆ : ಜಿಲ್ಲಾಡಳಿತ ಮಂಗಳವಾರ ಬೆಳಗ್ಗೆ ಜಯಮ್ಮ ಕುಟುಂಬದವರಿಗೆ ನೋಟೀಸ್ ಜಾರಿಗೊಳಿಸಿ ಇಂದು ಮಧ್ಯಾಹ್ನದೊಳಗೆ ಶವ ಸಂಸ್ಕಾರ ನಡೆಸದಿದ್ದರೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ಕುಟುಂಬ ಸದಸ್ಯರೊಂದಿಗೆ ತಹಶೀಲ್ದಾರ್ ಕುಲಕರ್ಣಿ ಅವರು ನಡೆಸಿದ ಸಂಧಾನ ಸಭೆಯೂ ಯಶಸ್ವಿಯಾಗಿದ್ದು, ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಶವ ಸಂಸ್ಕಾರ ಮಾಡುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಮಠದ ಜಾಗ ನೀಡಿದ್ದಕ್ಕಾಗಿ ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಜಯಮ್ಮ ಕುಟುಂಬದವರು ಮನವಿ ಮಾಡಿದ್ದಾರೆ.












Click it and Unblock the Notifications