ಆರಿದ್ರಾ ಮಳೆಯ ಆರ್ಭಟಕ್ಕೆ ಐವರು ಬಲಿ
ಮಂಗಳೂರು, ಜು.5 : ಕರಾವಳಿ ಮತ್ತು ಮಲೆನಾಡಿನಲ್ಲಿ ಸುರಿಯುತ್ತಿದ್ದ ಮಳೆ ಗುರುವಾರ ರಾತ್ರಿಯಿಂದ ಕೊಂಚ ಕಡಿಮೆ ಆಗಿದೆ. ಮಳೆ ಕಡಿಮೆ ಆಗಿದ್ದರೂ, ನದಿಗಳ ನೀರಿನ ಮಟ್ಟ ಕಡಿಮೆ ಆಗಿಲ್ಲ. ಆರಿದ್ರಾ ಮಳೆಯ ಆರ್ಭಟಕ್ಕೆ ಸಿಲುಕಿ ಐವರು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ನದಿಗಳು ತುಂಬಿ ಹರಿಯುತ್ತಿದ್ದು, ಶುಕ್ರವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಸಲಾಗಿದೆ. ಜಿಲ್ಲೆಯ ನೇತ್ರಾವತಿ, ಕುಮಾರಧಾರಾ ಮತ್ತು ಫಲ್ಗುಣಿ ನದಿಗಳು ಉಕ್ಕಿ ಹರಿಯುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ನೀರು ಪಾಲಾಗಿದ್ದಾರೆ. ಇಷಾಕ್ (20) ಮತ್ತು ರಜಾಕ್ (21) ಅಮ್ಮುಂಜೆ ಸಮೀಪ ಫಲ್ಗುಣಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಬೆಳ್ತಂಗಡಿ ಬಳಿ ಮಹಾಬಲ (45) ಮತ್ತು ಕೊಜ್ಜಪಾಡಿ ಬಳಿ ಕಲಂದರ್ (21) ನೇತ್ರಾವತಿ ನದಿಯಲ್ಲಿ ತೇಲಿ ಹೋಗಿದ್ದಾರೆ.

ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯ ಜಲಾವೃತವಾಗಿದೆ. (ಚಿತ್ರ ಕೃಪೆ : ಭರತ್ )
ಮಲೆನಾಡಿನಲ್ಲೂ ಮಳೆಯ ಅಬ್ಬರ ಗುರುವಾರ ರಾತ್ರಿಯಿಂದ ಕಡಿಮೆ ಆಗಿದೆ. ಆದರೆ, ನದಿಗಳ ನೀರಿನ ಮಟ್ಟ ಕಡಿಮೆ ಆಗಿಲ್ಲ. ಶಿಕಾರಿಪುರ ಮೂಲಕ ಜುಲ್ಪೀಕರ್ ಎನ್ನುವವರು ಬನ್ನೂರು ಸಮೀಪ ಭದ್ರಾ ನದಿ ನೋಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಶರಾವತಿ, ತುಂಗಾ, ಭದ್ರಾ, ವರದಾ, ಮಾಲತಿ, ಕುಮದ್ವತಿ ನದಿಗಳ ನೀರಿನ ಮಟ್ಟ ಇಳಿಕೆಯಾಗಿಲ್ಲ. ಶಿವಮೊಗ್ಗದಲ್ಲಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಶಿವಮೊಗ್ಗ - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 13 ರಲ್ಲಿಯ ಮಂಡಗದ್ದೆಯಲ್ಲಿ ಗುರುವಾರವೂ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ತುಂಗಾ ಜಲಾಶಯದಿಂದ ಸುಮಾರು 90 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನಗರದ ನದಿ ಪಾತ್ರದ ಕೆಳ ಪ್ರದೇಶಗಳು ಜಲಾವೃತವಾಗಿವೆ.
ದಾಖಲೆ ಒಳ ಹರಿವು : ಲಿಂಗನಮಕ್ಕಿಗೆ ಜಲಾಶಯಕ್ಕೆ ಗುರುವಾರ 1,05,587 ಕ್ಯೂಸೆಕ್ ನೀರು ಹರಿದು ಬಂದಿದ್ದು ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಲಿಂಗನಮಕ್ಕಿ, ನಾಗಝರಿ, ಸೂಪಾ ಮತ್ತು ಶರಾವತಿ ಜಲ ವಿದ್ಯುತ್ ಕೇಂದ್ರಗಳಿಗೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.












Click it and Unblock the Notifications