2000 ಶಾಲೆಗಳಿಗೆ ಬೀಗ ಹಾಕಲಿದೆ ಸರ್ಕಾರ!

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿರುವ 14,000 ಸರ್ಕಾರಿ ಶಾಲೆಗಳ ಪೈಕಿ, 2 ಸಾವಿರ ಶಾಲೆಗಳನ್ನು, ಮಕ್ಕಳಿಗೆ ತೊಂದರೆ ಆಗದಂತೆ ಮುಚ್ಚಲಾಗುವುದು ಎಂದು ಹೇಳಿದರು.
ಒಂದು ಗ್ರಾಮದಲ್ಲಿ ಕನಿಷ್ಠ ಎರಡು ಶಾಲೆಗಳು ಇರಬೇಕು. ಅಗತ್ಯವಿದ್ದರೆ, ಅದಕ್ಕಿಂತ ಹೆಚ್ಚಿನ ಶಾಲೆಗಳು ಇರಬಹುದು. ಅದರೆ, ಪ್ರಸ್ತುತ ಕೆಲವು ಗ್ರಾಮಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಶಾಲೆಗಳಿವೆ.
ಇಂತಹ ಶಾಲೆಗಳಲ್ಲಿ ಕೇವಲ 10ರಿಂದ 12 ಮಕ್ಕಳಿದ್ದಾರೆ. ಈ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ಹತ್ತಿರ ಶಾಲೆಗಳಿಗೆ ದಾಖಲು ಮಾಡಲಾಗುವುದು ಎಂದರು. ಒಂದು ಗ್ರಾಮದಲ್ಲಿ ಎರಡು ಶಾಲೆಗಳು ಮಾತ್ರ ಇರುಬೇಕು ಎಂದು ಸರ್ಕಾರ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.
ಮಕ್ಕಳು ಕಡಿಮೆ ಇರುವ ಶಾಲೆಗಳಿಗೆ ಸೌಕರ್ಯ ಒದಗಿಸುವುದು ಮತ್ತು ಶಿಕ್ಷಕರನ್ನು ನೇಮಕ ಮಾಡುವುದು ಕಷ್ಟ. ಆದ್ದರಿಂದ, ಶಾಲೆಗಳನ್ನು ಮುಚ್ಚಿ ಶಿಕ್ಷಕರನ್ನು ಹತ್ತಿರದ ಶಾಲೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.
ಮಾದರಿ ಶಾಲೆ ಮಾಡಲು ಸಿದ್ಧ : ಮಕ್ಕಳ ಕೊರತೆ ಸಮಸ್ಯೆ ಎದುರಿಸುತ್ತಿರುವ ಶಾಲೆಗಳನ್ನು ವಿಲೀನ ಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆಗಳನ್ನು ನಿರ್ಮಿಸುವ ಯೋಜನೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದರು. (ಏನಿದು ಮಾದರಿ ಶಾಲೆ)
ಶೀಘ್ರವೇ ಹೊಸ ಪಠ್ಯಕ್ರಮ : ಶಿಕ್ಷಣ ಇಲಾಖೆ ಶೀಘ್ರದಲ್ಲೇ 1ರಿಂದ 10ನೇ ತರಗತಿ ವರೆಗಿನ ಪಠ್ಯ ಪುಸ್ತಕವನ್ನು ಪರಿಷ್ಕರಿಸಲು ನಿರ್ಧರಿಸಿದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕದಲ್ಲಿ ಜಾತಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅನೇಕ ಅಂಶಗಳನ್ನು ಸೇರಿಸಿದೆ. ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಿ ಇಂತಹ ಅಂಶಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.












Click it and Unblock the Notifications