ಕ್ರಿಕೆಟರ್ ರಾಹುಲ್ ತಂದೆ ಶರದ್ ದ್ರಾವಿಡ್ ವಿಧಿವಶ

ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಶರದ್ ಅವರು ಪುತ್ರರಾದ ರಾಹುಲ್ ದ್ರಾವಿಡ್, ವಿಜಯ್ ದ್ರಾವಿಡ್, ಪತ್ನಿ ಪುಷ್ಪಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಫ್ರೇಜರ್ ಟೌನ್ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗ ತಿಳಿಸಿದೆ.
ಕಿಸಾನ್ ಜಾಮ್ ಸಂಸ್ಥೆಯಲ್ಲಿ ಮಾಜಿ ಉದ್ಯೋಗಿಯಾಗಿದ್ದ 79 ವರ್ಷ ವಯಸ್ಸಿನ ಶರದ್ ದ್ರಾವಿಡ್ ಅವರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ದ್ರಾವಿಡ್ ಗೆ 'ಜ್ಯಾಮಿ' ಎಂಬ ಅಡ್ಡಹೆಸರು ಬಂದಿದ್ದು ಅಪ್ಪ ಶರದ್ ಅವರ ಜಾಮ್ ಕಂಪನಿ ಕಡೆಯಿಂದ ಎಂಬುದು ವಿಶೇಷ.
70ರ ದಶಕದಲ್ಲಿ ಲೀಗ್ ಕ್ರಿಕೆಟ್ ನಲ್ಲೂ ಶರದ್ ದ್ರಾವಿಡ್ ಕಾಣಿಸಿಕೊಂಡಿದ್ದರು. 1996ರಲ್ಲಿ ಒಮ್ಮೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಮಹಾರಾಷ್ಟ್ರ ಮೂಲದ ದೇಶಸ್ಥ ಬ್ರಾಹ್ಮಣ ಕುಟುಂಬದಿಂದ ಬಂದ ಶರದ್ ಅವರು ಇಂದೋರ್ ನಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದರು. ಶರದ್ ಅವರ ಪತ್ನಿ ಪುಷ್ಪಾ ಅವರು ಯುವಿಸಿಇನಲ್ಲಿ ಆರ್ಕಿಟೆಕ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ.
ರಾಹುಲ್ ಬಾಲ್ಯದಿಂದಲೇ ಕ್ರಿಕೆಟ್ ಮೇಲೆ ವಿಪರೀತ ಒಲವು ಇರಿಸಿಕೊಂಡಿದ್ದ. ದೇಶಕ್ಕಾಗಿ ಆಡುವುದು ಅವನ ಅಪೇಕ್ಷೆಯಾಗಿತ್ತು. ಅವನ ಕನಸು ನನಸಾದುದಕ್ಕೆ ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ ಎಂದು ಶರದ್ ದ್ರಾವಿಡ್ ಅವರು ರಾಹುಲ್ ದ್ರಾವಿಡ್ ಅವರು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದಾಗ ಪ್ರತಿಕ್ರಿಯೆ ನೀಡಿದ್ದರು.
ಮಗನ ಭವಿಷ್ಯದ ಬಗ್ಗೆ ಎಲ್ಲಾ ತಂದೆಗಳಂತೆ ನನಗೂ ಭಯ ಕಾಡಿತ್ತು. ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ರಾಹುಲ್ ಓದುವಾಗ ಆತನ ಭವಿಷ್ಯದ ಬಗ್ಗೆ ಯೋಚನೆ ಶುರುವಾಗಿತ್ತು. ಕ್ರಿಕೆಟ್ ನಲ್ಲಿ ಅವಕಾಶ ದೊರೆಯದೇ ಹೋದರೆ ಏನು ಮಾಡುವುದು ಎಂದು ಚಿಂತಿಸಿದ್ದೆ. ಆದರೆ, ರಾಹುಲ್ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ ಎಂದು ಶರದ್ ಅವರು ಹೇಳಿದ್ದರು.












Click it and Unblock the Notifications