ನನ್ನ ಓಲೈಕೆಗೆ ಯಾರೂ ಪ್ರಯತ್ನಿಸಬೇಡಿ: ದಿಗ್ವಿಜಯ್ ಕಿವಿಮಾತು

ನನ್ನ ಓಲೈಕೆಗೆ ಯಾರೂ ಪ್ರಯತ್ನಿಸಬೇಡಿ: ನನ್ನ ಓಲೈಕೆಗೆ ಯಾರೂ ಪ್ರಯತ್ನಿಸಬೇಡಿ. ಅಂತಹ ವಶೀಕರಣಕ್ಕೆಲ್ಲ ನಾನು ಒಳಗಾಗುವುದಿಲ್ಲ ಎಂದು ಮುಖಂಡರಿಗೆ ಕಿವಿಮಾತು ಹೇಳಿದ ದಿಗ್ವಿಜಯ್ ಅವರು ಪ್ರತಿ ಜಿಲ್ಲೆಯಲ್ಲಿ ಸಮನ್ವಯ ಸಮಿತಿ ರಚಿಸಿ. ಬೇರುಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಿ ಎಂದು ತಾಕೀತು ಮಾಡಿದ್ದಾರೆ.
ಈ ಸರ್ವ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಬ್ಲಾಕ್ ಘಟಕಗಳ ಅಧ್ಯಕ್ಷರು ಸೇರಿ ಒಟ್ಟು 1200 ಮಂದಿ ಆಹ್ವಾನಿತರು ಪಾಲ್ಗೊಂಡಿದ್ದಾರೆ. ಸರ್ವ ಸದಸ್ಯರ ಸಭೆ ನಂತರ ಮಧ್ಯಾಹ್ನ ಪದಾಧಿಕಾರಿಗಳ ಸಭೆ ನಡೆಯಲಿದೆ. ಲೋಕಸಭಾ ಚುನಾವಣೆಯ ಸಿದ್ಧತೆ ಚರ್ಚೆಯ ಜತೆಗೆ ರಾಜ್ಯದಲ್ಲಿ ತಮಗೆ ಇನ್ನೂ ಅಧಿಕಾರ ಪ್ರಾಪ್ತಿಯಾಗದಿರುವ ಬಗ್ಗೆ ಅವಕಾಶ ವಂಚಿತ ಕಾಂಗ್ರೆಸ್ ನಾಯಕರು ದಿಗ್ವಿಜಯ್ ಸಿಂಗ್ ಅವರೆದುರು ತಮ್ಮ ಅಳಲನ್ನು ತೋಡಿಕೊಳ್ಳುವ ಸಾಧ್ಯತೆಗಳಿವೆ.
ಹೀಗಾಗಿ ಈ ಎರಡು ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ಮೂಲ ಕಾಂಗ್ರೆಸ್ಸಿಗರ ನಿರ್ಲಕ್ಷ್ಯ, ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಆರಂಭವಾಗದಿರುವುದು, ಸರ್ಕಾರ ಹಾಗೂ ಪಕ್ಷದ ನಡುವಿನ ಸಮನ್ವಯದ ಕೊರತೆ, ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಚಿವರ ಧೋರಣೆ, ಹಿರಿಯ ಶಾಸಕರ ಮಾತುಗಳಿಗೆ ಬೆಲೆ ನೀಡದ ಕಿರಿಯ ಸಚಿವರ ನಡವಳಿಕೆ ಮೊದಲಾದ ವಿಷಯಗಳು ರಾಜ್ಯ ಉಸ್ತುವಾರಿ ದಿಗ್ವಿಜಯ್ ಅವರ ಮುಂದೆ ಪ್ರಸ್ತಾಪವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸದಸ್ಯರು, ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರಾದ ಆಸ್ಕರ್ ಫರ್ನಾಂಡಿಸ್, ರೆಹಮಾನ್ ಖಾನ್, ವೀರಪ್ಪ ಮೊಯ್ಲಿ ಪಾಲ್ಗೊಳ್ಳುವರು. ಪೂರ್ವನಿಗದಿತ ಕಾರ್ಯಕ್ರಮದಿಂದಾಗಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿಕೆ ಹರಿಪ್ರಸಾದ್ ಅವರು ಸಭೆಗೆ ಹಾಜರಾಗಿಲ್ಲ.
ಸಿಎಂ ಸಿದ್ದು -ಡಿಕೆಶಿ ಭೇಟಿ:
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಸಚಿವ ಸ್ಥಾನ ವಂಚಿತ ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡುವ ಮುಂಚೆ ಉಭಯ ನಾಯಕರು ಏಕಾಂತದಲ್ಲಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಲಾರೆ:
ಮತ್ತೊಂದು ಬೆಳವಣಿಗೆಯಲ್ಲಿ ತಾವು ಎಂದೂ ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಲ್ಲ. ನನಗೆ ಯೋಗ್ಯತೆ ಇದ್ದರೆ ನನ್ನ ಮನೆ ಬಾಗಿಲಿಗೆ ಸಚಿವ ಸ್ಥಾನ ಹುಡುಕಿಕೊಂಡು ಬರುತ್ತದೆ. ನಾನಾಗಿ ಹೋಗಿ ಕೇಳಿಕೊಳ್ಳಲ್ಲ ಎಂದು ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ಕೆಆರ್ ರಮೇಶ್ ಕುಮಾರ್ ಅವರು ಕೋಲಾರದಲ್ಲಿ ಹೇಳಿದ್ದಾರೆ.












Click it and Unblock the Notifications