ಮಣಿಪಾಲ್ ರೇಪ್: ಹೇಳಿಕೆಗೆ ಸಿದ್ಧವೆಂದ ವಿದ್ಯಾರ್ಥಿನಿ

ಐಜಿಪಿ (ಪಶ್ಚಿಮ ವಲಯ) ಪ್ರತಾಪ್ ರೆಡ್ಡಿ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದು ವಿದ್ಯಾರ್ಥಿನಿಯ ಕೋರಿಕೆಯಂತೆ ಗೌಪ್ಯತೆ ಕಾಪಾಡಲಾಗುವುದು. ಹಾಗಾಗಿ ಆಕೆ ಹೇಳಿಕೆ ನೀಡುತ್ತಿದ್ದಂತೆ ಆರೋಪಪಟ್ಟಿಯನ್ನು ಅಂತಿಮಗೊಳಿಸಿ, ನ್ಯಾಯಾಲಯಕ್ಕೆ ಶೀಘ್ರವೇ ಸಲ್ಲಿಸುವುದಾಗಿ ಅವರು ಸ್ಪಷ್ಟಪಡಿಸಿದರು.
ಮಣಿಪಾಲ ಸರ್ಕಲ್ ಇನ್ಸ್ ಪೆಕ್ಟರ್ ಸದಾನಂದ ತಿಪ್ಪಣ್ಣನವರ್ ತನಿಖಾಧಿಕಾರಿಯಾಗಿದ್ದು, ಪ್ರಕರಣದಲ್ಲಿ ನಾವೆಲ್ಲರೂ ಅವರಿಗೆ ನೆರವಾಗುವುದಾಗಿಯೂ ಐಜಿಪಿ ಪ್ರತಾಪ್ ತಿಳಿಸಿದ್ದಾರೆ.
ಇನ್ನೂ ಇಬ್ಬರ ಬಂಧನ:
ಕೆಎಂಸಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವ ಮಣಿಪಾಲ ಪೊಲೀಸರು ಪ್ರಕರಣದ ಸಂಬಂಧ ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ.
ಬಾಲಚಂದ್ರ ಮತ್ತು ಹರೀಂದ್ರ ಇಂದು ಬಂಧನಕ್ಕೊಳಗಾದ ಇನ್ನಿಬ್ಬರು. ಬಾಲಚಂದ್ರ, ಪ್ರಮುಖ ಆರೋಪಿ ಯೋಗೀಶನ ಸೋದರನಾಗಿದ್ದರೆ ಹರೀಂದ್ರ, ಮತ್ತೊಬ್ಬ ಪ್ರಮುಖ ಆರೋಪಿ ಹರಿಪ್ರಸಾದನ ಸೋದರ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಬ್ಬರೂ ಸಾಕ್ಷ್ಯ ನಾಶ ಮಾಡುತ್ತಾರೆ ಎಂಬ ಕಾರಣದಿಂದಾಗಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಣಿಪಾಲ ಪೊಲೀಸರು ಇಬ್ಬರನ್ನೂ ಈಗ ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧ ಕೃತ್ಯಕ್ಕೆ ಬಳಸಲಾದ ಆಟೋ ರಿಕ್ಷಾದಲ್ಲಿ ಸಾಕ್ಷ್ಯ ನಾಶ ಪಡಿಸುವ ಮೂಲಕ ಪ್ರಧಾನ ಆರೋಪಿಗಳಿಗೆ ನೆರವಾಗುತ್ತಿದ್ದೆವು ಎಂದು ಬಂಧಿತರಿಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಐಜಿಪಿ ಪ್ರತಾಪ್ ಹೇಳಿದ್ದಾರೆ. ಮಂಗಳೂರು ಮತ್ತು ಬೆಂಗಳೂರಿನಿಂದ ವಿಧಿವಿಜ್ಞಾನ ತಜ್ಞರು ಬಂದಿದ್ದು ಪ್ರಕರಣದ ತನಿಖೆಯನ್ನು ನೆರವಾಗಿದ್ದಾರೆ.












Click it and Unblock the Notifications