ಕೇದಾರನಾಥ ಅನುಭವ ಬಿಚ್ಚಿಟ್ಟ ಬೆಂಗಳೂರು ನಿವಾಸಿ!
ಬೆಂಗಳೂರು, ಜು.1 : "ನಮ್ಮ ಅದೃಷ್ಟ ಚೆನ್ನಾಗಿತ್ತು ಸಾರ್, ಕೇದಾರನಾಥ ನಮ್ಮನ್ನು ಕಾಪಾಡಿದ...!" ಇಷ್ಟು ಹೇಳಿ ನೀಲಕಂಠ್ ಮೌನಕ್ಕೆ ಶರಣಾದರು. ಉತ್ತರಾಖಂಡ ಜಲಪ್ರಳಯದಿಂದ ಪಾರಾಗಿ ಬಂದ ಯಾತ್ರಿಕರಾದ ನೀಲಕಂಠ್ ಅಲ್ಲಿನ ಪರಿಸ್ಥಿತಿಯನ್ನು ಒಂದೇ ವಾಕ್ಯದಲ್ಲಿ ವಿವರಿಸಿದ್ದು ಹೀಗೆ.
ಕೆಂಗೇರಿ ಬಳಿಯ ಉಳ್ಳಾಲ ಉಪನಗರದ ನೀಲಕಂಠ್ (52) ಅವರು ಮೊದಲ ಬಾರಿ ಕೇದರಾನಾಥ ದರ್ಶನಕ್ಕೆ ತೆರಳಿದ್ದರು. ಕುಟುಂಬದವರು, ಸ್ನೇಹಿತರು ಸೇರಿದಂತೆ, ಬೆಂಗಳೂರಿನಿಂದ ತೆರಳಿದ್ದ 40 ಜನರ ತಂಡ ಸುರಕ್ಷಿತವಾಗಿ ಬಂದು ಮನೆ ಸೇರಿದೆ. ಪ್ರವಾಹದ ಭೀಕರ ಪರಿಸ್ಥಿತಿಯನ್ನು ಅವರು ಒನ್ ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
"ಎಲ್ಲೆಲ್ಲೂ ನೀರು, ಬಾಗೋ ಎಂಬ ಜನರು ಕೂಗು...!, ಕಣ್ಣ ಮುಂದೆಯೇ ನೀರಿದ್ದರೂ ಕುಡಿಯುವ ನೀರಿಗೆ ಬರ, ಮೈಲುಗಟ್ಟಲೇ ಸಾಲಾಗಿನಿಂತ ವಾಹನಗಳು, ಮುಟ್ಟಿದರೆ ಕುಸಿದು ಬೀಳುವ ಗುಡ್ಡಗಳು" ಇಷ್ಟೇ ಸಾರ್..ಬೇರೇ ಏನು ಕಾಣಲಿಲ್ಲ. ದೆಹಲಿಗೆ ಬಂದ ಮೇಲೆಯೇ ಮನೆ ತಲುಪುತ್ತೇವೆ ಎಂಬ ನಂಬಿಕೆ ಬಂತು ಎಂದು ನೀಲಕಂಠ್ ಒಂದು ಸುತ್ತಿನ ಮಾತು ಮುಗಿಸಿದರು.
ಕೇದಾರನಾಥ ಸ್ವಾಮಿಯ ದಶರ್ನವನ್ನು ಮೊದಲಬಾರಿಗೆ ಪಡೆದ ಸಂತೃಪ್ತಿ ನೀಲಕಂಠ್ ಅವರಲ್ಲಿದ್ದರೆ, ಭೀಕರ ಪ್ರವಾಹವನ್ನು ಕಣ್ಣಾರೆ ಕಂಡ ಭಯವೂ ಅವರಲ್ಲಿ ಇನ್ನೂ ಮನೆ ಮಾಡಿತ್ತು. ಗೌರಿಖಂಡ್ ಪ್ರದೇಶದಲ್ಲಿ ದೊರಕಿದ್ದ 15 ಮಂದಿ ಕನ್ನಡಿಗರು ಏನಾದರೂ? ಎಂಬ ಅವರ ಪ್ರಶ್ನೆಗೆ ನಮ್ಮ ಬಳಿಯೂ ಉತ್ತರವಿರಲಿಲ್ಲ. ಈ ಪ್ರಶ್ನೆ ಬಗೆಹರಿಯಲು ಹಲವು ದಿನಗಳೇ ಬೇಕಾಗಬಹುದು. ನೀಲಕಂಠ್ ಅವರ ಪ್ರವಾಸ, ಪ್ರಯಾಸದ ಅನುಭವವನ್ನು ಕೇಳಿ.

ಮೊದಲ ದಿನ ತುಂತುರು ಮಳೆಯಾಗುತ್ತಿತ್ತು.
ಮೇ 30ರಂದು ನಾವು ಬೆಂಗಳೂರಿನಿಂದ ಹೊರಟೆವು. ಜೂ.14ರಂದು ಗೌರಿಖಂಡ್ ತಲುಪಿದೆವು. ಜೂನ್ 15ರಂದು ಕೇದಾರನಾಥ್ ಗೆ ಭೇಟಿ ನೀಡಿದೆವು, ಚೆನ್ನಾಗಿ ದರ್ಶನವಾಯಿತು. ಅಂದು ಕೇವಲ ತುಂತುರು ಮಳೆಯಾಗುತ್ತಿತ್ತು. ನಾವು ಯಾವುದೇ ಅಪಾಯವಿಲ್ಲದೆ, ದರ್ಶನ ಮಾಡಿ ವಾಪಸ್ ಹೊರಟೆವು.

ಸಂಜೆ ವರುಣನ ದರ್ಶನವಾಯಿತು
ಕೇದಾರನಾಥ ದರ್ಶನ ಮಾಡಿ ಬರುವಾಗ, ಸಂಜೆ 5.30ಕ್ಕೆ ಮಳೆ ಪ್ರಾರಂಭವಾಯಿತು ತಸು ಜೋರಾಗಿ ಬೀಳುತ್ತಿತ್ತು. ಕೇದಾರನಾಥ ಗುಡ್ಡದ ಕೆಳಗಿರುವ ಗೋ ಸ್ವಾಮಿ ಲಾಡ್ಜ್ ಮೊದಲೇ ನಿರ್ಧರಿಸಿದಂತೆ ವಾಸ್ತವ್ಯ ಹೂಡಿದೆವು.

ರಾತ್ರಿ ಮೇಘ ಸ್ಫೋಟಿಸಿತು
ಜೂನ್ 15ರಂದು ರಾತ್ರಿ ಭಾರೀ ಶಬ್ದದೊಂದಿಗೆ ಮಳೆ ಪ್ರಾರಂಭವಾಯಿತು. ಊಟ ಮಾಡಿ ನಿದ್ದೆ ಮಾಡಲು ತಯಾರಾಗುತ್ತಿದ್ದೆವು. ಬೆಟ್ಟದಿಂದ ನೀರು ರಭಸವಾಗಿ ಹರಿದು ಭರಲು ಪ್ರಾರಂಭಿಸಿತು. ಎದುರಿಗಿದ್ದ ವಸ್ತು ಕಾಣದಷ್ಟು ಮಳೆ. ಲಾಡ್ಜ್ ಹತ್ತಿರವಿದ್ದ ಕೆಲವು ಕಟ್ಟಡಗಳು ಕುಸಿದಿದ್ದು ತಿಳಿಯಿತು.

ಕುದುರೆ ಮತ್ತು ಕಾರುಗಳು ತೇಲಿಹೋದವು
ಬೆಳಗ್ಗೆ ವೇಳೆಗೆ ಸ್ವಲ್ಪ ಮಳೆ ಕಡಿಮೆ ಆಗಿತ್ತು. ಲಾಡ್ಜ್ ಸಮೀಪ ರಾತ್ರಿ ಸುಮಾರು 50 ಕುದುರೆ ಮತ್ತು 10 ಕಾರುಗಳನ್ನು ಸ್ಪಲ್ಪ ಬಯಲಿನ ಪ್ರದೇಶದಲ್ಲಿದ್ದವು. ಬೆಳಗ್ಗೆ ಅಲ್ಲಿಗೆ ನೀರು ನುಗ್ಗಿತ್ತು. ರಾತ್ರಿಯ ಮಳೆಗೆ ಅವುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು.

ರಸ್ತೆಯೇ ಇಬ್ಬಾಗವಾಗಿತ್ತು
ಜೂನ್ 16ರಂದು ನಾವು ಕೇಧಾರನಾಥದಿಂದ ಹೊರಟೆವು. ಆದರೆ, ಸೀತಾಪುರ ಪ್ರದೇಶದಲ್ಲಿ ಸಿಲುಕಿದೆವು. ಸೀತಾಪುರದಿಂದ ಮುಂದಿನ ಮಾರ್ಗ ಮಳೆಯಿಂದಾಗಿ ಸಂಪೂರ್ಣ ಹಾಳಾಗಿತ್ತು. ರಸ್ತೆಯು ಇಬ್ಭಾಗವಾಗಿತ್ತು. ಆದ್ದರಿಂದ ಮೂರು ದಿನಗಳ ಕಾಲ ಈ ಪ್ರದೇಶದಲ್ಲಿಯೇ ವಾಸ್ತವ್ಯ ಹೂಡಬೇಕಾಯಿತು. ನಮ್ಮಂತೆ ಸುಮಾರು 300 ವಾಹನಗಳು ಸಿಕ್ಕಿಹಾಕಿಕೊಂಡಿದ್ದವು.

ಕುಡಿಯುವ 1 ಲೀಟರ್ ಗೆ 100 ರೂ.
ಸೀತಾಪುರದಲ್ಲಿ ಮೂರು ದಿನ ಕಳೆದ ಅನುಭವ ಭಯಾನಕ. ಗಾಡಿಯಲ್ಲಿ ತಿಂಡಿ ಇತ್ತು. ನಮ್ಮ ಟ್ರಾವೆಲ್ಸ್ ಕಂಪನಿಯವರು ಒಂದಷ್ಟು ತಂದಿದ್ದರು. ಆದರೆ, ಕುಡಿಯುವ ನೀರು ಇರಲಿಲ್ಲ. ಅಂಗಡಿಗಳಲ್ಲಿ 1 ಲೀಟರ್ ನೀರಿಗೆ 100 ರೂ. ಕೊಡಬೇಕಾಗಿತ್ತು. ತುಂಬಿ ಹರಿಯುತ್ತಿದ್ದ ಕೆಸರು ನೀರು ಕುಡಿದೆವು. ಒಂದು ಪ್ಯಾಕ್ ಬ್ರೆಡ್ 50 ರೂ. ಆಗಿದ್ದರೆ, ಒಂದು ಟೀ 30ರೂ ನೀಡಬೇಕಾಯಿತು. ಶೌಚಾಲಯದ ವ್ಯವಸ್ಥೆ ಇಲ್ಲದೆ ಮಹಿಳೆಯರು ಪರದಾಡುವಂತಾಯಿತು.

ವರುಣನ ಅರ್ಭಟ ತಗ್ಗಿತು
ಜೂನ್ 19ರಂದು ಮಳೆ ಕೊಂಚ ಕಡಿಮೆ ಆಗಿತ್ತು. ಬೆಳಗ್ಗೆ ಸೀತಾಪುರದಿಂದ ನಾವು ಗುಪ್ತ ಕಾಶಿಯತ್ತ ಹೊರಟೆವು, ರಸ್ತೆಯನ್ನು ತಕ್ಕ ಮಟ್ಟಿಗೆ ದುರಸ್ತಿ ಮಾಡಲಾಗಿತ್ತು. ವಾಹನಗಳು ಹರಸಾಹಸ ಪಟ್ಟು ಗುಪ್ತಕಾಶಿಗೆ ನಮ್ಮನ್ನು ರ ಸಂಜೆ ತಲುಪಿದೆವು.

ಹರಿದ್ವಾರಕ್ಕೆ ತಲುಪಬೇಕಾಗಿತ್ತು.
ಜೂನ್ 20ರಂದು ಬೆಳಗ್ಗೆ ಗುಪ್ತಕಾಶಿಯಿಂದ ಹರಿದ್ವಾರಕ್ಕೆ ಹೋಗಲು ಬೆಳಗ್ಗೆ 10 ಗಂಟೆಗೆ ಪ್ರಯಾಣ ಆರಂಭಿಸಿದೆವು. ವಾಹನ ದಟ್ಟಣೆಯಿಂದಾಗಿ ಮತ್ತೆ ಬೆಳಗ್ಗೆ 11 ಗಂಟೆಯಿಂದ, ರಾತ್ರಿ 7 ಗಂಟೆಯವರೆಗೂ ರಸ್ತೆಯಲ್ಲಿಯೇ ಸಿಕ್ಕಿಹಾಕಿಕೊಂಡೆವು. ಸತತ ಎರಡುದಿನಗಳ ಪ್ರಯಾಣದ ನಂತರ ಹರಿದ್ವಾರ ತಲುಪಿದೆವು.

ಸರ್ಕಾರ ಉತ್ತಮ ವ್ಯವಸ್ಥೆ ಮಾಡಿತ್ತು.
ಜೂ 22ರ ಬೆಳಗ್ಗೆ ಹರಿದ್ವಾರ ತಲುಪಿದೆವು. ಅಲ್ಲಿಂದ ದೆಹಲಿಗೆ ತೆರಳಲು ಕರ್ನಾಟಕ ಸರ್ಕಾರವೇ ವ್ಯವಸ್ಥೆ ಮಾಡಿತ್ತು. ದೆಹಲಿಯ ರಾಘವೇಂದ್ರ ಸ್ವಾಮಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿತ್ತು. ನಂತರ ಕರ್ನಾಟಕ ಭವನ ತಲುಪಿದೆವು. ಸರ್ಕಾರದ ವತಿಯಿಂದ ಉಚಿತವಾಗಿ ರೈಲ್ವೆ ಟಿಕೆಟ್ ವ್ಯವಸ್ಥೆ ಯಾಗಿತ್ತು. 27ರಂದು ಬೆಂಗಳೂರಿಗೆ ಮರಳಿದೆವು. ಅದರೆ, ಈಗ ಕೇದಾರನಾಥ ದೇವಾಲಯ ನೋಡಿದರೆ, ನಾವು ಇಲ್ಲಿಗೆ ಹೋಗಿದ್ದೇವೆ? ಎಂದು ಭಯವಾಗುತ್ತಿದೆ.












Click it and Unblock the Notifications