ನಾಲ್ಕು ಮಕ್ಕಳನ್ನು ಹೆತ್ತ ದಾವಣಗೆರೆಯ ಮಹಾತಾಯಿ!
ದಾವಣಗೆರೆ, ಜು.1 : ಎರಡು ಮಗುವಿಗೆ, ಮೂರು ಮಗುವಿಗೆ ಜನ್ಮ ನೀಡುವ ತಾಯಂದಿರ ಬಗ್ಗೆ ನಾವು ಕೇಳಿದ್ದೇವೆ. ಆದರೆ, ದಾವಣಗೆರೆಯಲ್ಲಿ ಒಬ್ಬಳು ಮಹಾತಾಯಿ ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ದಾವಣಗೆರೆಯವರಾದ ಗೀತಾ ಭಾನುವಾರ ರಾತ್ರಿ ಮೂರು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾಳೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.
ಭಾನುವಾರ ರಾತ್ರಿ 1.30ರ ಸುಮಾರಿಗೆ ಗೀತಾ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಆಗ ಅವರು ಮೂರು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಆಶ್ಚರ್ಯವೆಂದರೆ ಸಹಜ ಹೆರಿಗೆ ಮೂಲಕ ನಾಲ್ಕು ಮಕ್ಕಳಿಗೆ ಗೀತಾ ಜನ್ಮ ನೀಡಿದ್ದಾರೆ. ನಾಲ್ಕು ಮಕ್ಕಳು ಆರೋಗ್ಯವಾಗಿವೆ. ಶಿಕ್ಷಣ ಬಲು ತುಟ್ಟಿಯಾಗಿರುವ ಈ ಜಮಾನಾದಲ್ಲಿ ಅನಾಮತ್ ನಾಲ್ಕು ಮಕ್ಕಳನ್ನು ಗೀತಾ ಹೆತ್ತಿದ್ದಾರೆ.
ನಾಲ್ಕು ಮಕ್ಕಳ ಜನನ ಗೀತಾ ಕುಟುಂಬಕ್ಕೆ ಭಾರೀ ಹರ್ಷ ತಂದಿದೆ. ಮಕ್ಕಳೆಷ್ಟೇ ಇದ್ದರೂ ಚೆನ್ನಾಗಿ ಸಾಕುತ್ತೇವೆ ಎಂದು ಅವರು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.
ದಾಖಲೆ ಏನಿತ್ತು : ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಕೋ ನಗರದ ಮಹಿಳೆಯೊಬ್ಬಳು ಸತತ ಮೂರು ಹೆರಿಗೆಯಲ್ಲೂ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಕಳೆದ ವರ್ಷ ವಿಶ್ವದಾಖಲೆ ಮಾಡಿದ್ದರು.
ಮೊದಲ ಮತ್ತು ಎರಡನೇ ಹೆರಿಗೆಯಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದ ಕರೇನಾ ರೊಡ್ಜರ್(41) ಎಂಬಾಕೆ ಮೂರನೇ ಹೆರಿಗೆಯಲ್ಲಿ ಎರಡು ನಿಮಿಷದ ಅಂತರದಲ್ಲಿ ಅವಳಿ ಹೆಣ್ಣು ಮಕ್ಕಳನ್ನು ಹಡೆದು ದಾಖಲೆ ಮಾಡಿದ್ದರು.
ಐರ್ಲೆಂಡ್ ನಲ್ಲಿ 2013 ಮೇ ನಲ್ಲಿ ಅಮಿ ಮತ್ತು ಕ್ಯಾಟಿ ಎಂಬ ಅವಳಿ ಮಕ್ಕಳು 87 ದಿನಗಳ ಅಂತರದಲ್ಲಿ ಜನಿಸಿ, ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದವು.
ನಾಲ್ಕು ತಿಂಗಳ ಮುಂಚೆಯೇ ಹೆರಿಗೆ ನೋವು ಅನುಭವಿಸಿ ಅಮಿಗೆ ಜನ್ಮ ನೀಡಿದ್ದ ತಾಯಿ, ಮೂರು ತಿಂಗಳ ನಂತರ ಕ್ಯಾಟಿ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದು ಇತ್ತೀಚಿನ ಗಿನ್ನಿಸ್ ದಾಖಲೆ ಯಾಗಿತ್ತು.
ಆದರೆ, ದಾವಣಗೆರೆಯವರಾದ ಗೀತಾ ಈ ದಾಖಲೆಗಳನ್ನು ಮುರಿದಿದ್ದು, ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವಳಿ-ಜವಳಿ, ತ್ರಿವಳಿ ಎಂದೆಲ್ಲಾ ಕರೆಯುತ್ತಿದ್ದೆವು ಈಗ ಏನು ಕರೆಯಬೇಕು, ಎಂದು ನೀವೇ ಹೇಳಬೇಕು.












Click it and Unblock the Notifications