ವಯನಾಡು ಮಳೆ: ಕಬಿನಿ, ಕಾವೇರಿಗೆ ಹಿತ
ಮೈಸೂರು, ಜೂನ್ 25: ಇತ್ತ ರಾಜ್ಯದಲ್ಲಿ ನಾನಾ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಅನೇಕ ಅಣೆಗಳು ತುಂಬುತ್ತಿವೆ. ಕೇರಳದ ವಯನಾಡು ಭಾಗದಲ್ಲಿ ವಾರ್ಷಿಕ ಮಳೆ ಉತ್ತಮವಾಗಿದೆ.
ಆದರೆ ಅತ್ತ ಹಿಮಾಲಯ ಸುನಾಮಿ ಕಂಡ ಉತ್ತರಾಖಂಡ ರಾಜ್ಯದಲ್ಲಿ ಮತ್ತೆ ಮಳೆರಾಯ ತನ್ನ ಪ್ರಕೋಪ ತೋರಿದ್ದಾರೆ. ಮೇಘಸ್ಫೋಟ ಸಂಭವಿಸಿಲ್ಲವಾದರೂ ಯಾವುದೇ ಕ್ಷಣ ಆಕಾಶವೇ ಕಳಚಿ ಬೀಳುವಂತೆ ಮಳೆಯಾಗುವ ಲಕ್ಷಣಗಳು ಹೆಚ್ಚಾಗಿವೆ. ಹಾಗಾಗಿ ಪ್ರವಾಹ ಪರಿಹಾರ ಕಾರ್ಯಗಳು ಇಂದೂ ಬಹುತೇಕ ಸ್ಥಗಿತಗೊಂಡಿವೆ.

ಈ ಬಾರಿ ಮುಂಗಾರು/ಮಳೆಗಾಲದಲ್ಲಿ ಮಳೆ ಇನ್ನೂ ವಿಪರೀತವಾದರೆ ಕೇದಾರನಾಥ/ಬದರೀನಾಥ ಪುನರ್ ನಿರ್ಮಾಣ ಕಾರ್ಯಗಳು ವಿಳಂಬವಾಗುವ ಸಾಧ್ಯತೆಗಳು ಹೆಚ್ಚು. ಇದರಿಂದ ಭಕ್ತರು ಇನ್ನೂ 2-3 ವರ್ಷ ಅಲ್ಲಿಗೆ ತೀರ್ಥಯಾತ್ರೆಗೆ ತೆರಳುವುದು ಸಾಧ್ಯವಾಗುವುದಿಲ್ಲ.
ಮಡಿಕೇರಿ ವರದಿ: ಇನ್ನು ಕರ್ನಾಟಕದಲ್ಲಿ ಕೊಡಗು, ಮಂಗಳೂರು, ಉಡುಪಿ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕುಕ್ಕೆ ಸುಬ್ರಮಣ್ಯ ಬಳಿಯಿರುವ ಕುಮಾರಧಾರ ನದಿ ಕಳೆದ ವರ್ಷದಂತೆ ತುಂಬಿಹರಿಯುತ್ತಿದೆ.
ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ರಸ್ತೆ ಮೇಲೆ ಸುಮಾರು 1 ಅಡಿ ನೀರು ತುಂಬಿಕೊಂಡಿರುವುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಕೊಡಗುವಿನಲ್ಲಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಪಾತ್ರಕ್ಕೆ ನೀರು ಹರಿದುಬರುತ್ತಿದೆ. ಕೇರಳದ ವಯನಾಡು ಭಾಗದಲ್ಲಿಯೂ ಮೂರ್ನಾಲ್ಕು ದಿನಗಳಿಂದ ವಾರ್ಷಿಕ ಮಳೆ ಉತ್ತಮಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳಹರಿವು ಅಧಿಕವಾಗುತ್ತಿದೆ.
ಕಬಿನಿ ತುಂಬುತ್ತಿದ್ದಂತೆ ಭಾಗಮಂಡದಲ್ಲೂ ಮಳೆಯಾಗುತ್ತಿರುವುದರಿಂದ ಒಟ್ಟಾರೆಯಾಗಿ ಕಾವೇರಿ ನದಿ ತುಳುಕುವಂತಾಗಿದೆ. ಇದರಿಂದ ಕೆಆರ್ ಎಸ್ ಅಣೆಕಟ್ಟೆಯಲ್ಲಿ ಇಂದು 79.90 ಅಡಿ ನೀರು ನಿಂತಿದೆ.
ಒಟ್ಟಾರೆ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಕೃಷಿಗಾಗಿ ರೈತರು ಮತ್ತು ಕುಡಿಯುವ ನೀರಿಗಾಗಿ ನಗರವಾಸಿಗಳು ಕಳೆದ ವರ್ಷ ನೀರಿಗಾಗಿ ನಡೆದ ಆಹಾಕಾರವನ್ನು ನೆನಪಿಸಿಕೊಂಡು ಸಮಾಧಾನದ ನಿಟ್ಟುಸಿರುಬಿಡುವಂತಾಗಿದೆ.












Click it and Unblock the Notifications