ಮಣಿಪಾಲ್ ರೇಪ್: ಇನ್ನೂ ಆರೋಪಿಗಳ ಸುಳಿವಿಲ್ಲ

ರಾಜ್ಯ ಗೃಹ ಸಚಿವ ಕೆಜೆ ಜಾರ್ಜ್ ಭಾನುವಾರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತುಸು ಮುತುವರ್ಜಿಯಿಂದ ಪ್ರಕರಣದ ತನಿಖೆ ನಡೆಸಿದ ಸ್ಥಳೀಯ ಎಸ್ಪಿ ಬೋರಲಿಂಗಯ್ಯ ಅವರು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ಒಂದಷ್ಟು ವಿಚಾರಣೆ ನಡೆಸಿದ್ದಾರೆ. ಆದರೆ ಯಾರನ್ನೂ ಬಂಧಿಸಿಲ್ಲ. ಮತ್ತು ಅಪರಾಧಿಗಳ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ ಎಂದು ಸ್ಥಳೀಯ ಪತ್ರಕರ್ತ ರವಿರಾಜ್ ವಳಲಂಬೆ ಅವರು ತಿಳಿಸಿದ್ದಾರೆ.
ಈ ಮಧ್ಯೆ, ಉಡುಪಿ ಜಿಲ್ಲೆಯ ಎಲ್ಲ ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಂದ ಹೊರಬಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಉಡುಪಿ ನಗರದ ಹೃದಯ ಭಾಗದಲ್ಲಿರುವ ಕ್ಲಾಕ್ ಟವರ್ ಬಳಿ ಜಮಾಯಿಸಿದ್ದು, ಅಲ್ಲಿಂದ ಮುಂದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಅವರಿಗೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ.
ಇದೇ ವೇಳೆ ಆರೋಪಿಗಳ ಬಂಧನ, ವಶಕ್ಕೆ ತೆಗೆದುಕೊಂಡಿರುವುದು ಅಥವಾ ಅತ್ಯಾಚಾರ ನಡೆದಿಲ್ಲ ಎಂಬ ಮಾಹಿತಿಗಳು ಗಾಳಿಸುದ್ದಿಯಾಗಿ ಹಬ್ಬುತ್ತಿದ್ದು ಖಚಿತ ಮಾಹಿತಿ ನೀಡುವಂತೆ ಆಗ್ರಹಿಸಲಾಗುವುದು ಎಂದು ಪ್ರತಿಭಟನಾ ನಿರತ ಎಬಿವಿಪಿ ಕಾರ್ಯದರ್ಶಿ ಶಿವಕುಮಾರ್ ಅವರು ತಿಳಿಸಿದ್ದಾರೆ.
ಖುದ್ದು ಗೃಹ ಸಚಿವರೇ ವೈದ್ಯಕೀಯ ವರದಿಯನ್ನು ಆಧರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾರಾದರೂ ಸ್ಥಳೀಯ ಪೊಲೀಸರು ಮತ್ತು ಮಣಿಪಾಲ ಸ್ವಾಯತ್ತ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅತ್ಯಾಚಾರಕ್ಕೆ ಯತ್ನ ನಡೆದಿದೆ ಅಷ್ಟೇ ಎಂದು ಹೇಳಿದ್ದಾರೆ. ಬಾಧಿತ ವಿದ್ಯಾರ್ಥಿನಿ ಮಾಹೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications