ಮಹಿಳೆಯೊಂದಿಗೆ ಸಿಕ್ಕಿಬಿದ್ದ ಸತ್ಯಾನಂದ ವಿರುದ್ಧ ದೂರು

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯಿರುವ ಶಂಭು ಲಿಂಗಸ್ವಾಮಿ ದೇವಸ್ಥಾನವೊಂದರ ಬಳಿ ಶನಿವಾರ ರಾತ್ರಿ 11.30ರ ಸುಮಾರಿಗೆ ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾಗ ಗ್ರಾಮಸ್ಥರೇ ಅವರನ್ನು ಹಿಡಿದು ಮಂಡ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಪೊಲೀಸರು ಅವರ ವಿರುದ್ಧ ಕ್ರಮ ಜರುಗಿಸದೆ ಅವರನ್ನು ಬಿಟ್ಟಿದ್ದಾರೆ ಎಂದು ದೂರಲಾಗಿದೆ.
ಅನೈತಿಕ ಚಟುವಟಿಕೆ ನಡೆಸಿದ ಕಾರಣ ಸತ್ಯಾನಂದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಸತ್ಯಾನಂದ ಅವರನ್ನು ಬಂಧಿಸಿರುವುದನ್ನು ಅಥವಾ ಅವರನ್ನು ತಮ್ಮಗೆ ಒಪ್ಪಿಸಿರುವುದನ್ನು ಮಂಡ್ಯದ ಎಸ್ ಪಿ ಭೂಷಣ್ ಬೋರಾಸೆ ಅವರು ತಳ್ಳಿಹಾಕಿದ್ದಾರೆ.
ಇದೇ ದೇವಸ್ಥಾನದ ಬಳಿ ಹಿಂದೆ ಕೂಡ ಸತ್ಯಾನಂದ ಹಲವಾರು ಮಹಿಳೆಯರನ್ನು ಕರೆತಂದು ಅಸಹ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಮಹಿಳೆಯರು ತೀವ್ರ ಮುಜುಗರಕ್ಕೀಡಾಗುತ್ತಿದ್ದರು ಮತ್ತು ದೇವಸ್ತಾನದ ಬಳಿ ಬರಲು ಹಿಂಜರಿಯುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಸತ್ಯಾನಂದನ ಜೊತೆ ಇದ್ದ ಆ ಮಹಿಳೆ ಯಾರು ಎಂಬ ವಿವರ ಇನ್ನೂ ಬಹಿರಂಗವಾಗಬೇಕಿದೆ.
ಈ ಸುದ್ದಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸತ್ಯಾನಂದ ಅವರು, ತಮ್ಮ ವಿರುದ್ಧ ನೀಡಲಾಗಿರುವ ದೂರು ನೂರಕ್ಕೆ ಇನ್ನೂರರಷ್ಟು ಸುಳ್ಳು. ನಾನು ಆತ್ಮಶುದ್ಧಿಯಿರುವ ಮನುಷ್ಯ. ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ಹೂಡುತ್ತಿರುವವರು ನನ್ನ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ನ್ಯಾಯಕ್ಕಾಗಿ ನಾನು ಹೋರಾಟ ನಡೆಸಿಯೇ ತೀರುತ್ತೇನೆ ಎಂದಿದ್ದಾರೆ.
ಶನಿವಾರ ರಾತ್ರಿ ನನ್ನನ್ನು ಹಿಡಿಯಲಾಗಿದೆ ಎಂದು ಹೇಳಲಾಗಿರುವ ಸಮಯದಲ್ಲಿ ನಾನು ದೇವಸ್ಥಾನದ ಬಳಿ ಇರಲೇ ಇಲ್ಲ. ಮನೆಯಲ್ಲಿ ಇದ್ದೆ. ಇನ್ನು ಅನೈತಿಕ ಚಟುವಟಿಕೆಯ ಮಾತೆಲ್ಲಿ ಬಂತು? ಎಂದು ಪ್ರಶ್ನಿಸಿರುವ ಅವರು, ತಮಗೆ ಪ್ರಾಣ ಬೆದರಿಕೆ ಇದ್ದು ಮಂಡ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮಾಜಿ ಎಂಎಲ್ಎ ವಿರುದ್ಧ ದೂರು ನೀಡಿರುವುದಾಗಿ ಹೇಳಿದ್ದಾರೆ.
ನನ್ನ ಏಳ್ಗೆಯನ್ನು ಬಯಸದವರು ನಡೆಸುತ್ತಿರುವ ಷಡ್ಯಂತ್ರವಿದು. ಇದರಲ್ಲಿ ಗ್ರಾಮಸ್ಥರ ಕೈವಾಡವಿಲ್ಲ ಎಂದು ಅವರು ನುಡಿದಿದ್ದಾರೆ. ಹಿಂದೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದಿದ್ದಾಗ ಅಂಬರೀಷ್ ಅವರನ್ನು 'ಬ್ಲಾಕ್ ಮೇಲರ್' ಎಂದು ಸತ್ಯಾನಂದ ಜರಿದಿದ್ದರು. ಸತ್ಯಾನಂದ ಅವರನ್ನು ಕೆಪಿಸಿಸಿ ಸದಸ್ಯ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯ ಕೂಡ ಕೇಳಿಬಂದಿತ್ತು.












Click it and Unblock the Notifications