ಹೆಬ್ಬಾಳ ರಸ್ತೆ ಗುಂಡಿಗೆ ಯುವ ಟೆಕ್ಕಿ ದಾರುಣ ಬಲಿ

Electronic Cityಯಲ್ಲಿರುವ Tech Star ಐಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ 27 ವರ್ಷದ ನೀಲಕಂಠನ್ ಮೃತ ದುರ್ದೈವಿ. ಇವರು ಮುಂದಿನ ತಿಂಗಳಿಂದ ಕಂಪನಿಯ ಪರವಾಗಿ ಮಲೇಷ್ಯಾದಲ್ಲಿ ಕೆಲಸ ನಿರ್ವಹಿಸಬೇಕಿತ್ತು. ಆದರೆ ಅಷ್ಟೊರೊಳಗೆ ಯಮರಾಯ ಅವರನ್ನು ಅಕಾಲಿಕವಾಗಿ ಕರೆದೊಯ್ದಿದ್ದಾರೆ.
ಮಲೇಷ್ಯಾಗೆ ಹೋಗಬೇಕೆಂದು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ತೆರಳಿ ಅಲ್ಲೊಂದೊಷ್ಟು ಏರ್ಪಾಟುಗಳನ್ನು ಮಾಡಿಕೊಂಡು ವಾಪಸಾಗುತ್ತಿದ್ದಾಗ ನೀಲಕಂಠನ್ ಅವರು ಹೆಬ್ಬಾಳ ವ್ಯಾಪ್ತಿಯ ದೊಡ್ಡ ಬೊಮ್ಮಸಂದ್ರದಲ್ಲಿ ಶನಿವಾರ ಸಂಜೆ ಅಸುನೀಗಿದ್ದಾರೆ.
ಹೀರೋ ಹೊಂಡಾದಲ್ಲಿ ಕಸಿನ್ ಮನೆಗೆಂದು ಹೊರಟಿದ್ದ ನೀಲಕಂಠನ್ ಕೃಷ್ಣ ದೇವಸ್ಥಾನವಿರುವ ಗುಂಡಿಗಳ ರಸ್ತೆಯಲ್ಲಿ ಕ್ಯಾಂಟರ್ ಟ್ರಕ್ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾಗುತ್ತಿದ್ದಂತೆ ಟ್ರಕ್ ಡ್ರೈವರ್ ಪರಾರಿಯಾಗಿದ್ದಾನೆ.
ನೀಲಕಂಠನ್ ಮೂಲತಃ ತಮಿಳುನಾಡಿನ ರಾಣಿಪೇಟೆಯವರು. ಅವಿವಾಹಿತ ನೀಲಕಂಠನ್, ಇನ್ನೇನು ತಮ್ಮ ಕಸಿನ್ ಮನೆ ಅನತಿ ದೂರದಲ್ಲಿದೆ ಎನ್ನುವಾಗ ಸಾವಿಗೆ ತುತ್ತಾಗಿದ್ದಾರೆ. ಮೃತರ ದೇಹವನ್ನು ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದ್ದು, ಕುಂಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ಹೆಬ್ಬಾಳ ಸಂಚಾರಿ ಪೊಲೀಸರು ತಿಳಿಸಿದ್ದಾರೆ.











Click it and Unblock the Notifications