ಹೈ ವೋಲ್ಟೇಜ್ ಭಾರತ್-ಪಾಕ್ ಪಂದ್ಯಕ್ಕೆ ರೆಡೀನಾ?
ಬರ್ಮಿಂಗ್‌ಹ್ಯಾಮ್, ಜೂ. 14 : ವಿಶ್ವಕಪ್ ಇರಲಿ, ಎರಡೂ ರಾಷ್ಟ್ರಗಳ ನಡುವಿನ ಸರಣಿಯೇ ಇರಲಿ ಅಥವಾ ಫ್ರೆಂಡ್ಲಿ ಮ್ಯಾಚೇ ಇರಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಕ್ರಿಕೆಟ್ ಪಂದ್ಯ ಯಾವತ್ತೂ ಕಾವು ಕಳೆದುಕೊಳ್ಳುವುದಿಲ್ಲ. ಹೇಳಿಕೇಳಿ ಇಂಗ್ಲೆಂಡಿನಲ್ಲಿ ಈಗ ಮರಗಟ್ಟುವ ಚಳಿ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಮೊದಲೆರಡು ಪಂದ್ಯಗಳಲ್ಲಿ ಜಯಸಾಧಿಸಿ ಸೆಮಿ ಫೈನಲ್ ತಲುಪಿದೆ. ಆದರೆ, ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳಲ್ಲಿಯೂ ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ.
ಈಗ ಶನಿವಾರ, ಜೂ.15ರಂದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳಿಗೆ ಗಳಿಸುವುದು ಮತ್ತು ಕಳೆದುಕೊಳ್ಳುವಂಥದ್ದೇನೂ ಇಲ್ಲ. ಭಾರತ ಸೋತರೂ ಸೆಮಿಫೈನಲ್‌ಗೆ ಮುನ್ನಡೆಯಲಿದೆ, ಪಾಕಿಸ್ತಾನ ಗೆದ್ದರೂ ಪಾಕಿಸ್ತಾನಕ್ಕೆ ಮರಳಲಿದೆ.

ಆದರೂ, ಎರಡು ಕಟ್ಟಾ ವೈರಿಗಳ ನಡುವಿನ ಪಂದ್ಯವೆಂದರೆ ಕ್ರಿಕೆಟ್ ಪ್ರೇಮಿಗಳಿಗಂತೂ ಪರಮಾನಂದ. ಪ್ರೇಕ್ಷಕರ ರೋಮರೋಮಗಳು ನವಿರೇಳುತ್ತವೆ, ಭಾವಾವೇಶಗಳು ತಾರಕಕ್ಕೇರುತ್ತವೆ. ಕಳೆದ ಏಪ್ರಿಲ್‌ನಲ್ಲಿ ಮಾರಾಟಕ್ಕಿದ್ದ ಟಿಕೆಟ್‌ಗಳು ಮೂವತ್ತೇ ನಿಮಿಷದಲ್ಲಿ ಆನ್ ಲೈನ್ ನಲ್ಲಿ ಮಾರಾಟವಾಗಿದ್ದನ್ನು ನೋಡಿದರೆ ಜನರ ನಿರೀಕ್ಷೆಗಳು ಯಾವ ಪ್ರಮಾಣದ್ದೆಂದು ತಿಳಿಯುತ್ತದೆ.
ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ರಾದ್ಧಾಂತಗಳು ಭಾರತೀಯ ಕ್ರಿಕೆಟ್ ಆಟಗಾರರನ್ನು ಕಂಗೆಡಿಸಿದ್ದರೂ ತಲೆಕೆಡಿಸಿಕೊಳ್ಳದ ಧೋನಿ ಪಡೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿಯಾಗಿ ಆಡುತ್ತಿದೆ. ಪಾಕಿಸ್ತಾನ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿರುತ್ತದೆ. ಪರಿಸ್ಥಿತಿ ಏನೇ ಇರಲಿ ಪಾಕಿಸ್ತಾನ ಅತ್ಯಂತ ಡೇಂಜರಸ್ ತಂಡ ಎನ್ನುವುದರಲ್ಲಿ ಯಾವುದೇ ಮಾತಿಲ್ಲ. ಲೀಗ್ ಹಂತದಲ್ಲಿ ಆದ ಸೋಲನ್ನು ಮರೆಯಲಾದರೂ ಗೆಲ್ಲಲು ಪಾಕಿಸ್ತಾನ ಪ್ರಯತ್ನಿಸಲಿದೆ.
ಎಗ್‌ಬಸ್ಟನ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ 25 ಸಾವಿರ ಪ್ರೇಕ್ಷಕರು ಆಗಮಿಸುವ ನಿರೀಕ್ಷೆಯಿದೆ. ಇವರಲ್ಲಿ ಶೇ.90ರಷ್ಟು ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳೇ ತುಂಬಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಟಿಕೆಟ್ ಸಿಗದಿದ್ದರೇನಂತೆ ಅಥವಾ ಜಗತ್ತಿನ ಯಾವುದೇ ಎಲ್ಲೆಯಲ್ಲಿರಲಿ ಸ್ಟಾರ್ ಕ್ರಿಕೆಟ್ ಚಾನಲ್ಲಿನಲ್ಲಿ ಆಟದ ಮಜಾ ತೆಗೆದುಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಕನಿಷ್ಠ ಈ ಪಂದ್ಯದಲ್ಲಾದರೂ ಕರ್ನಾಟಕದ ವಿನಯ್ ಕುಮಾರ್‌ಗೆ ಆಡಲು ಚಾನ್ಸ್ ಸಿಗಬಹುದಾ?
ಹ್ಯಾಗಿದ್ರೂ ಸಿಕ್ಕಾಪಟ್ಟೆ ಚಳಿಗಾಳಿ, ಶನಿವಾರ ಅನೇಕರಿಗೆ ರಜಾ ಬೇರೆ. ಅಲ್ಲಿಲ್ಲಿ ಓಡಾಡಿ, ಅದೂಇದೂ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು, ಬೆಚ್ಚಗೆ ಮನೇಲೆ ಇದ್ದು, ಕಾಂದಾ ಬಜಿ ತಯಾರಿಸಿ, ಟೀ ಅಥವಾ ಕಾಫಿ ಹೀರಿಕೊಂಡು ಕ್ರಿಕೆಟ್ ಮ್ಯಾಚ್ ಮಜಾ ಅನುಭವಿಸಿ.
ತಂಡಗಳು
ಭಾರತ : ಮಹೇಂದ್ರ ಸಿಂಗ್ ಧೋನಿ (ನಾಯಕ), ಆರ್ ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ವಿರಾಟ್ ಕೋಹ್ಲಿ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಇರ್ಫಾನ್ ಪಠಾಣ್, ಸುರೇಶ್ ರೈನಾ, ಇಶಾಂತ್ ಶರ್ಮಾ, ರೋಹಿತ್ ಶರ್ಮಾ, ಮುರಳಿ ವಿಜಯ್, ವಿನಯ್ ಕುಮಾರ್, ಉಮೇಶ್ ಯಾದವ್.
ಪಾಕಿಸ್ತಾನ : ಮಿಸ್ಬಾ-ಉಲ್-ಹಕ್ (ನಾಯಕ), ನಾಸಿರ್ ಜಮ್ಶೆಡ್, ಮೊಹಮ್ಮದ್ ಹಫೀಜ್, ಇಮ್ರಾನ್ ಫರ್ಹಾತ್, ಕಮ್ರಾನ್ ಅಕ್ಮಲ್, ಶೋಯಾಬ್ ಮಲಿಕ್, ಅಸದ್ ಶಫೀಕ್, ಸಯೀದ್ ಅಜ್ಮಲ್, ಜುನೇದ್ ಖಾನ್, ಎಮ್. ಇರ್ಫಾನ್, ಅಸದ್ ಅಲಿ, ವಹಾಬ್ ರಿಯಾಜ್, ಉಮರ್ ಅಮಿನ್, ಅಬ್ದುಲ್ ರೆಹಮಾನ್, ಎಹಸಾನ್ ಅದಿಲ್.












Click it and Unblock the Notifications