ಜೆಪಿ ನಗರ ವೇಶ್ಯಾವಾಟಿಕೆ: 2 ಯುವತಿಯರ ಬಂಧನ

ಜೆಪಿ ನಗರದ ಅನ್ನಪೂರ್ಣೇಶ್ವರಿ ಲೇಔಟಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಸಿಸಿಬಿ ತಂಡವು ದಂಧೆಯಲ್ಲಿ ತೊಡಗಿದ್ದ ಇಬ್ಬರು ಯುವತಿಯರು ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಕೋಣನಕುಂಟೆ ಕ್ರಾಸ್ ಸಮೀಪದ ಸಿದ್ದಪ್ಪ ಲೇಔಟ್ ನಿವಾಸಿ ಸದಾಶಿವಯ್ಯ ಅಲಿಯಾಸ್ ರಾಜು (27), ಕಗ್ಗಲಿಪುರದ ಕೃಷ್ಣ (23) ಎಂಬ ಯುವಕರು ಪಶ್ಚಿಮ ಬಂಗಾಳ ಮೂಲದ ರಶ್ಮಿ ಹಾಗೂ ಮೋಹಿನ್ ಅವರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು. ವೇಶ್ಯಾವಾಟಿಕೆಗೆಂದೇ ಅವರು ಮನೆಯೊಂದನ್ನು ಬಾಡಿಗೆಗೆ ಪಡೆದು ದಂಧೆ ನಡೆಸುತ್ತಿದ್ದರು.
ಬಂಧಿತ ಆರೋಪಿಗಳಿಂದ ಐದು ಮೊಬೈಲ್ ಹಾಗೂ 2,700 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಟಿ ಕ್ರೈಂ ಬ್ರ್ಯಾಂಚಿನ ಮಹಿಳಾ ಮತ್ತು ಮಾದಕವಸ್ತು ವಿಭಾಗದ ಪೊಲೀಸರು ತಿಳಿಸಿದ್ದಾರೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಟ್ಕಾ ಮಾರುತ್ತಿದ್ದವರ ಬಂಧನ:
ಸರಕಾರ ಗುಟ್ಕಾ ಮಾರಾಟ ನಿಷೇಧಿಸುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಗುಟ್ಕಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಸಿಸಿಬಿ ಪೊಲೀಸರು ರಾಜರತ್ನಂ ಮಾರುಕಟ್ಟೆಯಲ್ಲಿ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಬಸವನಗುಡಿಯ ಇಬ್ಬರು ಸೋದರರನ್ನು ಬಂಧಿಸಿದ್ದಾರೆ. ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications