ವೇಶ್ಯಾವಾಟಿಕೆ ಪಿರಿಪಿರಿ: ಸ್ಥಳೀಯರಿಂದ ಮನೆಗೆ ಮುತ್ತಿಗೆ

ಇಲ್ಲಿನ ಕೊರೆಗಾಂವ್ ಪಾರ್ಕ್ ಡ್ಯೂಪ್ಲೆಕ್ಸ್ ಬಂಗಲೆಯಲ್ಲಿ ನಿರಾತಂಕವಾಗಿ ನಿರಂತರವಾಗಿ ಹಗಲು ರಾತ್ರಿಯೆನ್ನದೆ ವೇಶ್ಯಾವಾಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಸುಮಾರು 100ಕ್ಕೂ ಹೆಚ್ಚು ಸ್ಥಳೀಯರು ಆ ಮನೆಯ ಮೇಲೆ ಮುಗಿಬಿದ್ದು ಕಲ್ಲುಗಳನ್ನು ಬೀಸಿ, ಕಿಟಕಿ ಗಾಜುಗಳನ್ನು ಹೊಡೆದು ಮನೆಯನ್ನು ಧ್ವಂಸಗೊಳಿಸಿದ್ದಾರೆ.
'ಕೊರೆಗಾಂವ್ ಪ್ರದೇಶದಲ್ಲಿರುವ ರಂಗವಿಲಾಸ ಕೋಆಪರೇಟಿವ್ ಹೌಸಿಂಗ್ ಸೊಸೈಟಿಗೆ ಸೇರಿದ ಪಾರ್ಕ್ ಡ್ಯೂಪ್ಲೆಕ್ಸ್ ಬಂಗಲೆ ವೇಶ್ಯಾವಾಟಿಕೆಗೆ ಸ್ವರ್ಗಸದೃಶವಾಗಿತ್ತು. ಆದರೆ ಇದರಿಂದ ನಾವು ನಿತ್ಯ ನರಕ ಅನುಭವಿಸುತ್ತಿದ್ದೆವು. ಮಧ್ಯರಾತ್ರಿಯಾದರೂ ಗ್ರಾಹಕರು ಇಲ್ಲಿ ಬೀಡುಬಿಡುತ್ತಿದ್ದರು. ಅವರ ಭಾನಗಡಿ ಸಭ್ಯತೆ ಮೀರಿತ್ತು. ಪೊಲೀಸರಿಗೂ ದೂರು ನೀಡಿದ್ದೆವು. ಈ ಮಧ್ಯೆ ಆ ಮನೆಯ ಮೇಲೆ ದಳಿ ನಡೆದಿದೆ' ಎಂದು ಸ್ಥಳೀಯರೊಬ್ಬರು ಅಲವತ್ತುಕೊಂಡಿದ್ದಾರೆ.
ಸುಮಾರು ನೂರು ಜನ ರಾತ್ರಿ 11 ಗಂಟೆಯ ವೇಳೆಯಲ್ಲಿ ಸದರಿ ಕಾರಸ್ಥಾನದ ಮೇಲೆ ಕಲ್ಲು ಬೀಸತೊಡಗಿದರು. ಮನೆಯ ಆವರಣದೊಳಕ್ಕೆ ನುಗ್ಗಿ ಅಲ್ಲಿದ್ದ ಹೂಕುಂಡ, ವಾಹನ ಮತ್ತಿತರ ವಸ್ತುಗಳನ್ನು ಪುಡಿಪುಡಿ ಮಾಡಿದ್ದಾರೆ ಎಂದು ಸಮೀಪದ ರಂಗವಿಲಾಸ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
2012ರಲ್ಲೂ ಪೊಲೀಸ್ ಆಯುಕ್ತರಿಗೇ ದೂರು ನೀಡಿದ್ದೆವು. ಆದರೆ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕೆಲವು ದಿನಗಳ ಕಾಲ ಎಲ್ಲವೂ ಸ್ತಬ್ಧವಾಗಿತ್ತು. ಆದರೆ ಕೆಲ ಕಾಲದ ನಂತರ ಮತ್ತೆ ಅನೈತಿಕ ಚಟುವಟಿಕೆ ಯಾವುದೇ ಎಗ್ಗಿಲ್ಲದೆ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಬಡಾವಣೆಯಲ್ಲೂ ಇಂತಹ ಪ್ರಸಂಗಗಳು ನಡೆಯುತ್ತಿರಬಹುದು. ಅದರಲ್ಲೂ ನಗರದ ಹೊರವಲಯದಲ್ಲಿರುವ ಬಡಾವಣೆಗಳಲ್ಲಿ ಇಂತಹ ಬವಣೆಗಳು ಹೆಚ್ಚು. ಪರಿಸ್ಥಿತಿ ಕೈಮೀರುವಂತಿದ್ದರೆ, ಇದರ ರಗಳೆ, ಕಿರಿಕಿರಿ, ಪಿರಿಪಿರಿ ಹೆಚ್ಚಾದರೆ ಮೇಲಿನಂತೆ ನೀವು ಒಂದು ಕೈ ನೋಡಬಹುದಲ್ಲಾ?












Click it and Unblock the Notifications