ಇನ್ಫೋಸಿಸ್ ಉದ್ಯೋಗಿಗಳಿಗೆ ಸಂಬಳ ಏರಿಕೆ

ಬಿಎಸ್ ಇ ಗೆ ನೀಡಿರುವ ಹೇಳಿಕೆಯಂತೆ ಇನ್ಫೋಸಿಸ್ ಸಂಸ್ಥೆ ತನ್ನ ಎಲ್ಲಾ ಐಟಿ ಉದ್ಯೋಗಿಗಳಿಗೆ ಸರಾಸರಿ ಶೇ 8 ರಷ್ಟು ಸಂಬಳ ಏರಿಕೆ ಮಾಡಿದೆ. ಪರಿಷ್ಕೃತ ದರಗಳು ಜು.1 ರಿಂದ ಜಾರಿಗೆ ಬರಲಿದೆ.off shore ಉದ್ಯೋಗಿಗಳಿಗೆ ಸದ್ಯಕ್ಕೆ ಯಾವುದೇ ಸಿಹಿ ಸುದ್ದಿ ಇಲ್ಲ.
ಗುರುವಾರ ಷೇರುಪೇಟೆಯಲ್ಲಿ ಇನ್ಫೋಸಿಸ್ ಷೇರುಗಳು ಕೊಂಚ ಡಲ್ ಹೊಡೆಯುತ್ತಿತ್ತು. ದಿನದ ಅಂತ್ಯಕ್ಕೆ ಬಿಎಸ್ ಇ ನಲ್ಲಿ 2379.10 ರು. ನಂತೆ ಶೇ 1.85ರಷ್ಟು ಕುಸಿತ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 2379.90 ರು ನಂತೆ ಶೇ 1.71 ರಷ್ಟು ಇಳಿಮುಖವಾಗಿತ್ತು.
ಇನ್ಫೋಸಿಸ್ ನ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಜೂನ್.1 ರಂದು ಮತ್ತೊಮ್ಮೆ ಇನ್ಫೋಸಿಸ್ ಬೋರ್ಡ್ ಗೆ ಮರಳಿದ್ದರು. ಎನ್ ಆರ್ ನಾರಾಯಣ ಮೂರ್ತಿ ಅವರನ್ನು ಕಾರ್ಯಕಾರಿ ಚೇಮರ್ನ್ ಆಗಿ ನೇಮಕ ಮಾಡಿದ ಮೇಲೆ ಇನ್ಫೋಸಿಸ್ ಉದ್ಯೋಗಿಗಳು ಹಾಗೂ ಷೇರುದಾರರಲ್ಲಿ ಹೊಸ ಉತ್ಸಾಹ, ನಿರೀಕ್ಷೆ ಮೂಡಿತ್ತು. ಇನ್ಫೋಸಿಸ್ 3.0 ಅನುಷ್ಠಾನದ ಭಾಗವಾಗಿ ಉದ್ಯೋಗಿಗಳಿಗೆ ಈಗ ಸಂಬಳ ಏರಿಕೆ ಸಿಹಿ ಸುದ್ದಿ ನೀಡಲಾಗಿದೆ.
ಈ ಬಾರಿ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಇಂಕ್ರಿಮೆಂಟ್ ನೀಡುವುದೇ ಇಲ್ಲ ಎಂದು ತಿಳಿದಿದ್ದಾಗ ಕಳೆದ ಮೇ 25ರಂದು ಶೇ 10 ರಷ್ಟು ಇಂಕ್ರೀಮೆಂಟ್ ನೀಡಿತ್ತು. ಅದಕ್ಕೂ ಮುನ್ನ ಕಳೆದ ಅಕ್ಟೋಬರಿನಲ್ಲಿ ಶೇ. 6ರ ಪ್ರಮಾಣದಲ್ಲಿ ಇಂಕ್ರಿಮೆಂಟ್ ನೀಡಲಾಗಿತ್ತು.
ಇನ್ಫೋಸಿಸ್ ಜನವರಿಯಲ್ಲಿ ತನ್ನ ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಹೊರ ಹಾಕಿತ್ತು. ಇದರ ಬೆನ್ನಲ್ಲೇ ಸುಮಾರು 9000 ಉದ್ಯೋಗಿಗಳಿಗೆ ಬಡ್ತಿ ಯೋಗ ಲಭಿಸಲಿದೆ ಎಂದು ಸಿಇಒ ಶಿಬುಲಾಲ್ ಘೋಷಿಸಿದ್ದರು. ವರ್ಷಾಂತ್ಯದೊಳಗೆ ಇನ್ನೊಂದು ಸುತ್ತಿನ ಬಡ್ತಿ ನೀಡಲಾಗುವುದು ಎಂದು ಶಿಬುಲಾಲ್ ಸುಳಿವು ನೀಡಿದ್ದರು.












Click it and Unblock the Notifications