ಪೀಣ್ಯ, ಯಶವಂತಪುರ ನಡುವೆ ಓಡಿತು ಮೆಟ್ರೋ!

ಸೋಮವಾರ ಪೀಣ್ಯ ಡಿಪೋದಿಂದ - ಯಶವಂತಪುರದವರೆಗೆ 5.3 ಕಿ.ಮೀ ಉದ್ದದ ಮಾರ್ಗದಲ್ಲಿ ಮೆಟ್ರೊ ರೈಲು ಪರೀಕ್ಷಾರ್ಥ ಸಂಚಾರವನ್ನು ನಡೆಸಿತು. ಯಾವುದೇ ಅಡಚಣೆ ಇಲ್ಲದೆ, 5 ಕಿ.ಮೀ ಮಾರ್ಗದಲ್ಲಿ ರೈಲು ಯಶಸ್ವಿಯಾಗಿ ಸಂಚರಿಸಿತು ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಪೀಣ್ಯ ಡಿಪೋದಿಂದ ಸಂಪಿಗೆ ರಸ್ತೆಯ ನಿಲ್ದಾಣದವರೆಗೆ ಒಟ್ಟು 10.43 ಕಿ.ಮೀ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ 10 ನಿಲ್ದಾಣಗಳು ನಿರ್ಮಾಣಗೊಂಡಿವೆ. ಶೀಘ್ರವೇ ಈ ಮಾರ್ಗದಲ್ಲೂ ಪರಿಕ್ಷಾರ್ಥ ಸಂಚಾರ ನಡೆಸಲಾಗುವುದು ಎಂದು ಮೆಟ್ರೋ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಪೀಣ್ಯ, ಯಶವಂತಪುರ ನಡುವಿನ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದ್ದರಿಂದ, ಈ ಮಾರ್ಗವನ್ನು ಪ್ರಯಾಣಿಕರ ಓಡಾಟಕ್ಕೆ ಮುಕ್ತಗೊಳಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ರೈಲು ಸಂಚಾರವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ದೊರೆತ ಬಳಿಕ, ಮಾರ್ಗದ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುವುದು ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮಾರ್ಗ ಪ್ರಯಾಣಿಕರಿಗೆ ಮುಕ್ತವಾರದರೆ ನಗರದಲ್ಲಿ ಮತ್ತೊಂದು ಮೆಟ್ರೋ ರೈಲು ಓಡಲಿದೆ.
ಪಥ ಬದಲು ವಿವಾದ : ಜಯದೇವ ಹೃದ್ರೋಗ ಸಂಸ್ಥೆಯ ಆವರಣದಿಂದ ಮುಂಭಾಗದ ಬಡಾವಣೆಗೆ ಬದಲಾವಣೆ ಮಾಡಿರುವ ನಮ್ಮ ಮೆಟ್ರೊ ನಿಲ್ದಾಣ ಮತ್ತು ಪಥಕ್ಕೆ ಸಮ್ಮತಿ ನೀಡಬಾರದು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರನ್ನು ಭೇಟಿ ಮಾಡಿದ ಈಸ್ಟ್ ಎಂಡ್ ಮತ್ತು ಕಾಸಾ ಅನ್ಸಲ್ ಅಪಾರ್ಟ್‌ಮೆಂಟ್ ನಿವಾಸಿಗಳು ಈ ಯೋಜನೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.
ಮೆಟ್ರೋ ಪಥ ಬದಲಾವಣೆಯಾದರೆ, ನೂರಾರು ನಾಗರೀಕರು ತಮ್ಮ ಮನೆ ಕಳೆದುಕೊಳ್ಳುತ್ತಾರೆ. ಆದ್ದರಿಂದ ಉದ್ದೇಶಿತ ಯೋಜನೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಅನುಮತಿ ನೀಡಬಾರದು ಎಂದು ನಿವಾಸಿಗಳು ಮನವಿ ಮಾಡಿದರು.
ನಿವಾಸಿಗಳ ಮನವಿ ಆಲಿಸಿದ ಎಸ್.ವಿ.ರಂಗನಾಥ್ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸಿಗಳು ವಿಧಾನಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.












Click it and Unblock the Notifications