ಬಿಜಿಪಿ ಸರ್ಕಾರ ನಿಷ್ಕ್ರಿಯವಾಗಿತ್ತು : ಸಿಎಜಿ ವರದಿ
ಬೆಂಗಳೂರು, ಜೂ. 7 : ಬಿಜೆಪಿ ಸರ್ಕಾರದ ಒಂದು ವರ್ಷದ ಅವಧಿಯ ಆರ್ಥಿಕ ನಿರ್ವಹಣೆಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆದಿವೆ ಎಂದು ಸಿಎಜಿ ವರದಿ ಹೇಳಿದೆ. ಕುಡಿಯುವ ನೀರು ಯೋಜನೆ ನ್ಯೂನ್ಯತೆ, ಸರ್ಕಾರಕ್ಕೆ ಅಧಿಕಾರಿಗಳಿಂದಲೇ ವಂಚನೆ, ಅಗತ್ಯಕ್ಕಿಂತ ಅಧಿಕ ವೆಚ್ಚ ಮಾಡಿ, ಅಕ್ರಮಗಳನ್ನು ನಡೆಸಲಾಗಿದೆ ಎಂದು ವರದಿ ಆರೋಪಿಸಿದೆ.
ನಗರದಲ್ಲಿ ಗುರುವಾರ 2011-12ನೇ ಸಾಲಿನ ಮಹಾಲೆಕ್ಕಪರಿಶೋಧಕರ (ಸಿಎಜಿ) ಸ್ಥಳೀಯ ಸಂಸ್ಥೆಗಳ ವರದಿಯನ್ನು ಬಿಡುಗಡೆ ಮಾಡಲಾಯಿತು. ಸಾಮಾನ್ಯ ಮತ್ತು ಸಾಮಾಜಿಕ ವಲಯ ಲೆಕ್ಕ ಪರಿಶೋಧನೆ ಮಹಾಲೇಖಪಾಲ ಡಿ.ಜೆ.ಭದ್ರ ವರದಿ ಬಿಡುಗಡೆ ಮಾಡಿ, ಸರ್ಕಾರದ ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
2011-12ನೇ ಸಾಲಿನ ಆರ್ಥಿಕ ನಿರ್ವಹಣೆಯಲ್ಲಿ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ವಿಫಲವಾಗಿದೆ. ಸ್ಥಳೀಯ ಸಂಸ್ಥೆಗಳು ಮತ್ತು ನಗರಪಾಲಿಕೆಗಳ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆದಿದೆ. ಸರ್ಕಾರಗಳು ಅಕ್ರಮಗಳನ್ನು ತಡೆಗಟ್ಟಲು ಸಂಪೂರ್ಣ ವಿಫಲವಾಗಿರುವುದು ಅಂಕಿ ಅಂಶಗಳಿಂದ ತಿಳಿಯುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಲ್ಲಿ ಅಕ್ರಮ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಸರ್ಕಾರಕ್ಕೆ ವಂಚನೆ, ವಿವಿಧ ಯೋಜನೆಗಳಿಗೆ ಅಗತ್ಯಕ್ಕಿಂತ ಅಧಿಕ ವೆಚ್ಚ, ನಿಯಮ ಉಲ್ಲಂಘಿಸಿ ಕಾಮಗಾರಿ, ಲೆಕ್ಕಪತ್ರಗಳಲ್ಲಿ ಭಾರೀ ವಿಳಂಬ, ಅಕ್ರಮವಾಗಿ ಹಣ ಪಾವತಿ, ಆದಾಯ ತೆರಿಗೆ ವಸೂಲು ಮಾಡದೆ ಗುತ್ತಿಗೆದಾರರಿಗೆ ಅನುಕೂಲ ಮುಂತಾದವು ಒಂದು ವರ್ಷದ ಅವಧಿಯಲ್ಲಿ ನಡೆದಿವೆ ಎಂದು ವರದಿ ಹೇಳುತ್ತಿದೆ.

ಕುಡಿಯುವ ನೀರು ಯೋಜನೆ
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ಹಣವನ್ನು ಸಂಪೂರ್ಣವಾಗಿ ಬಳಸಿಲ್ಲ. 13.97 ಕೋಟಿ ಯೋಜನೆಗಳು ನಿರುಪಯುಕ್ತ ಮತ್ತು ನಿಷ್ಕ್ರಿಯಗೊಂಡಿವೆ. ಕುಡಿಯುವ ನೀರಿಗಾಗಿ ನಗರ ಪಾಲಿಕೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಗತ್ಯ ವೆಚ್ಚಗಳನ್ನು ಮಾಡಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟು ಮಾಡಲಾಗಿದೆ.

ಸರ್ಕಾರಕ್ಕೆ 10 ಲಕ್ಷ ರೂ. ವಂಚನೆ
ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಿಲ್ಲ. ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸರ್ಕಾರಕ್ಕೆ ಕೇವಲ 77 ಸಾವಿರ ರೂ. ಪಾವತಿ ಮಾಡಿದ್ದು, ಹತ್ತು ಲಕ್ಷ ರೂ. ವಂಚಿಸಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಅನಗತ್ಯ ವೆಚ್ಚಗಳು
ಬಳ್ಳಾರಿ, ಬಾಗಲಕೋಟೆ, ಚಿಕ್ಕಮಗಳೂರು, ಗುಲ್ಬರ್ಗ ಮತ್ತು ರಾಮನಗರ ಪಂಚಾಯತ್ ರಾಜ್ ತಾಂತ್ರಿಕ ವಿಭಾಗಗಳ ಕಾಮಗಾರಿಗಳಲ್ಲಿ ಅನಗತ್ಯವಾಗಿ 1.42 ಕೋಟಿ ರೂ ಹೆಚ್ಚುವರಿ ವೆಚ್ಚ ಮಾಡಲಾಗಿದೆ. ಬೆಳಗಾವಿ ನಗರ ಪಾಲಿಕೆಯು ನಿಷ್ಕ್ರಿಯ ವಸ್ತು ತ್ಯಾಜ್ಯ ವಿಲೇವಾರಿಗೆ 5.22 ಕೋಟಿ ರೂ. ಹೆಚ್ಚುವರಿ ಪಾವತಿ ಮಾಡಿದೆ.

ಬಿಬಿಎಂಪಿ ಅಕ್ರಮಗಳು
ಬಿಬಿಎಂಪಿ ವ್ಯಾಪ್ತಿಯಲ್ಲಿ ನರ್ಮ್ ಯೋಜನೆಯಲ್ಲಿ 61.35 ಕೋಟಿ ರೂ ಹೆಚ್ಚುವರಿ ಪಾವತಿ ಮಾಡಲಾಗಿದೆ. ವಿವಿಧ ಕಾಮಗಾರಿಗಳು ಪೂರ್ಣಗೊಳ್ಳದೆ ಇದ್ದರೂ, ಗುತ್ತಿಗೆದಾರರಿಗೆ ಮಾತ್ರ 1.88 ಕೋಟಿ ರೂ. ಪಾವತಿ ಮಾಡಲಾಗಿದೆ.

ಪಂಚಾಯತ್ ರಾಜ್ ಇಲಾಖೆ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ನಿಧಿ 2ರ ಅಡಿ ಖರ್ಚಾಗದೇ ಉಳಿದಿದ್ದ 1,657.72 ಕೋಟಿ ರೂ. ಹಣವನ್ನು ಸರ್ಕಾರ ಹಿಂಪಡೆದಿಲ್ಲ. ಕಳೆದ ಒಂಭತ್ತು ವರ್ಷಗಳಿಂದ ಹಣ ಹಾಗೆ ಉಳಿದಿದೆ.












Click it and Unblock the Notifications